ನೀಲಗಾಯಿ (Boselaphus tragocamelus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ನೀಲಗಾಯಿಯು ಜಿಂಕೆ ಜಾತಿಯ ಹರಿಣವು. ಬಾಂಗ್ಲಾದೇಶ, ಪಾಕಿಸ್ಥಾನ, ದಕ್ಷಿಣ ನೇಪಾಳ, ಭಾರತದ ಎಲ್ಲ ಭಾಗಗಳಲ್ಲಿ ಹಿಮಾಲಯದ ತಪ್ಪಲಿನಿಂದ ದಕ್ಷಿಣದ ಕರ್ನಾಟಕದಲ್ಲಿ, ತಮಿಳುನಾಡಿನ ಸೇಲಂ-ಕೊಯಮತ್ತೂರ್ ಪ್ರಾಂತಗಳಲ್ಲಿ ಕಂಡುಬರುತ್ತವೆ. ಬೃಹದಾಕಾರದ ಎತ್ತುಗಳಂತೆ ಕಾಣುತ್ತಿದ್ದ ಇವುಗಳನ್ನು ನೀಲಿ ಹೋರಿ ಎಂದೂ ಕರೆಯುತ್ತಾರೆ.
ಗಂಡು ಹೆಣ್ಣುಗಳಿಗಿಂತ ದೊಡ್ಡದಾಗಿರುತ್ತವೆ. ಈ ಪ್ರಾಣಿಗಳ ತೂಕವು ಸುಮಾರು 240 ಕೆ.ಜಿ ಇರುತ್ತದೆ. ಇವುಗಳ ಕಾಲುಗಳು ತೆಳ್ಳಗಿರುತ್ತವೆ. ಗಂಡು ಪ್ರಾಣಿಗಳಿಗೆ ಮಾತ್ರ ಎರಡು ಕೊಂಬೆಗಳಿರುತ್ತವೆ, ಹೆಣ್ಣುಗಳಿಗೆ ಕೊಂಬುಗಳಿರುವುದಿಲ್ಲ. ಕೊಂಬುಗಳು ನುಣುಪಾಗಿದ್ದು ಶಂಕುವಿನ ಆಕಾರದಲ್ಲಿರುತ್ತವೆ. ಹೆಣ್ಣುಗಳಿಗೆ ಕೊಂಬುಗಳಿರುವ ಜಾಗದಲ್ಲಿ ಚಿಕ್ಕದಾದ ಗುರುತುಗಳಿರುತ್ತವೆ. ಸಾಮಾನ್ಯವಾಗಿ ಈ ಎತ್ತುಗಳು ಗುಂಪುಗಳಲ್ಲಿ ವಾಸಿಸುತ್ತವೆ. ಈ ಪ್ರಾಣಿಗಳ ಆಹಾರವು ಹುಲ್ಲು, ಎಲೆ, ಬೇರು, ಹಣ್ಣು ಮುಂತಾದವು. ಇವು ದಟ್ಟವಾದ ಅರಣೈಗಳಿಂದ ದೂರವಿರುತ್ತವೆ. ಹುಲಿ, ಚಿರತೆ, ತೋಳಗಳಿಗೆ ಇವು ಸಹಜವಾದ ಆಹಾರವಾಗಿವೆ. ಸದ್ಯಕ್ಕೆ ಭಾರತದಲ್ಲಿ ಇವುಗಳ ಸಂಖ್ಯೆ ಒಂದು ಲಕ್ಷ ಎಂದು ಅಂದಾಜು.