ಮಂಗಳೂರು: ನಗರ ಹೊರವಲಯದ ಪಣಂಬೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಸ್ಕೂಟರ್ ಸವಾರರೊಬ್ಬರು ಬಲಿಯಾದ ಘಟನೆ ನಡೆದಿದೆ. ಮೃತರನ್ನು ತೋಕೂರು ನಿವಾಸಿ ಟೈಟಸ್ ಫೆರಾವೊ (60) ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯ ಹೊಂಡಕ್ಕೆ ಸ್ಕೂಟರ್ ಬಿದ್ದಿದ್ದು, ಆಯತಪ್ಪಿ ಸವಾರನೂ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂಬದಿಯಿಂದ ಬಂದ ಸರಕು ತುಂಬಿದ ಲಾರಿಯೊಂದು ಸ್ಕೂಟರ್ ಮತ್ತು ಸವಾರನ ಮೇಲೆ ಚಲಿಸಿದ್ದು ಸ್ಕೂಟರ್ ಸವಾರ ಟೈಟಸ್ ಫೆರಾವೊ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಂಗಳೂರು ನಗರ ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಹಿತ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಮಳೆಯಿಂದಾಗಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಮರಣದ ಹೊಂಡಗಳಾಗಿ ಪರಿಣಮಿಸಿವೆ. ಎರಡು ದಿನಗಳ ಹಿಂದೆಯಷ್ಟೇ ಪಣಂಬೂರಿನಿಂದ ಬಿ ಸಿ ರೋಡ್ ಮಾಣಿ ವರೆಗಿನ ಹೊಂಡ ಬಿದ್ದ ರಸ್ತೆಗಳ ದುರಾವಸ್ಥೆ ಬಗ್ಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಗಮನಸೆಳೆದಿದ್ದರು.