ಮಾರ್ಗಮಧ್ಯ ಅಸ್ವಸ್ಥಗೊಂಡ ಚಾಲಕ – ಬಿಎಂಟಿಸಿ ಬಸ್ ಚಲಾಯಿಸಿದ ಎಸಿಪಿ

ಮಂಗಳೂರು(ಬೆಂಗಳೂರು): ಆರೋಗ್ಯ ಸಮಸ್ಯೆಯಿಂದ ಬಿಎಂಟಿಸಿ ಚಾಲಕ ಅಸ್ವಸ್ಥಗೊಂಡಿದ್ದರಿಂದ ನಗರದಲ್ಲಿ ನಡುರಸ್ತೆಯಲ್ಲೇ ನಿಲ್ಲಿಸಲಾಗಿದ್ದ ಬಸ್ಸನ್ನು ಸಹಾಯಕ ಪೊಲೀಸ್ ಕಮಿಷನರ್ ರಾಮಚಂದ್ರಪ್ಪ, ತಾವೇ ಚಲಾಯಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಶಿವಾಜಿನಗರ-ಕಾಡುಗೋಡಿ‌ ಮಾರ್ಗವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಮಾರ್ಗ ಮಧ್ಯೆದಲ್ಲಿಯೇ ಅಸ್ವಸ್ಥಗೊಂಡ ಪರಿಣಾಮ ಬಸ್‌ ಚಾಲನೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಚಾಲಕ ತಲುಪಿದ್ದರು. ಹೀಗಾಗಿ ಚಾಲಕ ಓಲ್ಡ್ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ಬಸ್​ ನಿಲ್ಲಿಸಿದ್ದ. ಎರಡು ದಿನಗಳ ವಿರೋಧ ಪಕ್ಷಗಳ ನಾಯಕರ ಸಭೆ ಹಿನ್ನೆಲೆ ನಗರಕ್ಕೆ ವಿವಿಐಪಿಗಳ ಆಗಮನ ಹಿನ್ನೆಲೆ ಓಲ್ಡ್ ಏರ್ಪೋರ್ಟ್​ ರಸ್ತೆಯಲ್ಲಿ ಎಸಿಪಿ ರಾಮಚಂದ್ರಪ್ಪ ಅವರನ್ನು ಭದ್ರತೆಗೆ ನಿಯೋಜನೆಗೊಳಿಸಲಾಗಿತ್ತು.

ಈ ವೇಳೆ ರಸ್ತೆ ಮಧ್ಯ ನಿಂತಿದ್ದ ಬಿಎಂಟಿಸಿ ಬಸ್​ ಅನ್ನು ಗಮನಿಸಿದ ರಾಮಚಂದ್ರಪ್ಪ, ಚಾಲಕನನ್ನು ಆಂಬ್ಯುಲೆನ್ಸ್‌ನಲ್ಲಿ‌ ಆಸ್ಪತ್ರೆಗೆ ಕಳುಹಿಸಿ, ಬಳಿಕ ಬಸ್ ಅನ್ನು ಸುಮಾರು ಒಂದು ಕಿ.ಮೀ ದೂರದ ಬಸ್​ ನಿಲ್ದಾಣದವರೆಗೆ ಸ್ವತಃ ಚಾಲನೆ ಮಾಡಿಕೊಂಡಿ ಹೋಗಿದ್ದಾರೆ. ಎಸಿಪಿ ರಾಮಚಂದ್ರಪ್ಪ ಅವರು ಬಸ್ ಚಲಾಯಿಸುವ ವೀಡಿಯೊ ಹಂಚಿಕೊಂಡಿರುವ ಹಲವರು, ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here