ಮಂಗಳೂರು (ಉಳ್ಳಾಲ ): ಮಧ್ಯಾಹ್ನದ ಊಟದ ವೇಳೆಗೆ ಬಟ್ಟೆಗೆ ಸಾಂಬಾರು ಚೆಲ್ಲಿದ ಎಂಬ ಕ್ಷುಲ್ಲಕ ಕಾರಣಕ್ಕೆ 9ನೇ ತರಗತಿಯ ವಿದ್ಯಾರ್ಥಿಗಳಿಬ್ಬರ ನಡುವೆ ಗಲಾಟೆ ಆಗಿದ್ದು, ಓರ್ವ ವಿದ್ಯಾರ್ಥಿ ಮತ್ತೋರ್ವ ವಿದ್ಯಾರ್ಥಿಯ ಎದೆಗೆ ಚಾಕು ಎಸೆದ ಘಟನೆ ಮಂಗಳೂರಿನ ಉಳ್ಳಾಲ ತಾಲೂಕಿನ ನರಿಂಗಾನ
ಗ್ರಾಮದ ಮೊಂಟೆ ಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದಿದೆ.
ಮಧ್ಯಾಹ್ನದ ಊಟದ ವೇಳೆಯಲ್ಲಿ ವಿದ್ಯಾರ್ಥಿಯೊಬ್ಬನ ತಟ್ಟೆಯಿಂದ ಸಾಂಬಾರು ಚೆಲ್ಲಿ ಬಟ್ಟೆಯಲ್ಲಿ ಕಲೆಯಾಯಿತೆಂದು ಕೆರಳಿದ ವಿದ್ಯಾರ್ಥಿ ಸಾಂಬಾರು ಚೆಲ್ಲಿದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿದ್ದಲ್ಲದೆ ಆತನ ನೋಟ್ ಪುಸ್ತಕವನ್ನು ಸಾಂಬಾರಿಗೆ ಹಾಕಿ ಅಲ್ಲಿಂದ ಮುಂದೆ ಹೋಗಿದ್ದಾನೆ. ಈ ಈ ವೇಳೆ ಏಟು ತಿಂದ ವಿದ್ಯಾರ್ಥಿ ಬ್ಯಾಗಿನಿಂದ ಚೂರಿ ತೆಗೆದು ಹಲ್ಲೆಗೈದವನ ಮೇಲೆ ನೇರವಾಗಿ ಎಸೆದಿದ್ದಾನೆ. ಅದೃಷ್ಟವಶಾತ್ ಎದೆಯ ಬಲ ಭಾಗದ ಪಕ್ಕಕ್ಕೆ ಚೂರಿ ಚುಚ್ಚಿದ್ದು ಗಾಯಗೊಂಡ ವಿದ್ಯಾರ್ಥಿಯನ್ನು ಉಪ ಪ್ರಾಂಶುಪಾಲರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಘಟನೆಯ ದೃಶ್ಯಾವಳಿ ತರಗತಿ ಕೊಠಡಿಯ ಸಿಸಿಟಿವಿ ಕ್ಯಾಮೆರಾ ದಲ್ಲಿ ದಾಖಲಾಗಿದೆ. ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಹಾಗೂ ಇತರ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಕ್ಕಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.