ಅಮ್ಮ ಕಲಾವಿದರು ತಂಡಕ್ಕೆ ದೀಪಕ್ ರೈ ಪಾಣಾಜೆ – ತುಳು ರಂಗಾಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ

ಮಂಗಳೂರು (ಪುತ್ತೂರು): ಜನರಿಗೆ ಮನೋರಂಜನೆ ನೀಡುವುದರ ಜೊತೆಗೆ ಅವರ ಯೋಚನಾಲಹರಿಯನ್ನು ಬದಲಾಯಿಸಬಲ್ಲ ಶಕ್ತಿ ಇರುವುದು ನಾಟಕ ಅಥವಾ ರಂಗಭೂಮಿಗೆ. ಕರಾವಳಿಯ ತುಳು ರಂಗಭೂಮಿಯ ವ್ಯಾಪ್ತಿ ಮತ್ತು ಶೈಲಿ, ಬೀರುತ್ತಿರುವ ಪ್ರಭಾವ ವಿಸ್ಮಯವನ್ನೇ ಸೃಷ್ಟಿಸಿದೆ. 90 ವರ್ಷಗಳ ಇತಿಹಾಸವಿರುವ ತುಳುರಂಗಭೂಮಿ ಸಾವಿರಾರು ಕಲಾವಿದರಿಗೆ ಜನ್ಮ ನೀಡಿದೆ.

1933 ರಿಂದ 2023 ರ ವರೆಗಿನ ತುಳು ರಂಗಭೂಮಿಯ ಇತಿಹಾಸ, ಹಿರಿಮೆ, ಶ್ರೀಮಂತಿಕೆಯಿಂದ ವಿಶ್ವದಾದ್ಯಂತ ಜನ ಮನ್ನಣೆ ಗಳಿಸಿದೆ. ತುಳು ರಂಗಭೂಮಿ ವಿವಿಧ ಸ್ತರದ ಕಲಾ ದಿಗ್ಗಜರನ್ನು ಸೃಷ್ಟಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಅಂತಹ ನೂರಾರು ಕಲಾವಿದರ ನಡುವೆ ತನ್ನದೇ ಆದ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿ ಮನರಂಜನೆಗೆ ಹೊಸ ಬಾಷ್ಯ ಬರೆದವರು ದೀಪಕ್ ರೈ ಪಾಣಾಜೆ. ಬೆಂಗಳೂರಿನ ಪ್ರತಿಷ್ಠಿತ ನೃತ್ಯ ತಂಡದ ಸದಸ್ಯರಾಗಿ ಅವಕಾಶ ಪಡೆದ ದೀಪಕ್ ರೈ ಮುಂದೆ ಬೆಳ್ಳಾರೆ ಪಿ ಬಿ ರೈ ಅವರ ನಂದಿಕೇಶ್ವರ ನಾಟಕ ಸಂಘದಲ್ಲಿ ಅಭಿನಯಿಸಿ ಜನರ ಕರತಾಡನ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಮುಂದೆ “ಒಟ್ಟಿಗೆ ಪೋಯಿ” ನಾಟಕದ ಮೂಲಕ ತುಳು ರಂಗಭೂಮಿಗೆ ಕಾಲಿಟ್ಟ ಅವರ ರಂಗ ಪಯಣ ಇಂದಿನವರೆಗೂ ಅಡೆತಡೆ ಇಲ್ಲದೆ ಸಾಗಿದೆ. ಬದುಕಿನ ಜಂಜಾಟದ ನಡುವೆ ಒತ್ತಿ ಬರುವ ಕಣ್ಣೀರನ್ನು ಜಗವರಿಯದಂತೆ ನುಂಗಿ ಬಲೇ ತೆಲಿಪಾಲೆ, ಮಜಾ ಭಾರತ ದಂತಹ ಕಾರ್ಯಕ್ರಮದಲ್ಲಿ ನೀಡಿದ ಅಭಿನಯ ಪ್ರೇಕ್ಷಕರನ್ನು ಹುಚ್ಚೆದ್ದು ನಗುವಂತೆ ಮಾಡಿತ್ತು. ತನ್ನ ಅಭಿನಯದ ಕಾರಣದಿಂದ ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಅವಕಾಶ ಪಡೆದ ದೀಪಕ್ ರೈ ಒಬ್ಬ ಪ್ರಬುದ್ಧ ಕಲಾವಿದ. ಇದಕ್ಕೆ ಇತ್ತೀಚಿಗಿನ ಸೂಪರ್ ಡೂಪರ್ ಹಿಟ್ ಚಿತ್ರ ಕಾಂತಾರದ ಹಾಸ್ಯ ಪಾತ್ರದಲ್ಲಿ ನೀಡಿದ ಮೇರು ಅಭಿನಯವೇ ಸಾಕ್ಷಿ.

ಇಂತಹ ಮೇರು ನಟ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ರಂಗ ಪಯಣದ ತಾಣ ಬದಲಿಸಿರುವ ದೀಪಕ್ ರೈ ಅಮ್ಮ ಕಲಾವಿದರು ಕುಡ್ಲ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಅಮ್ಮ ಕಲಾವಿದರು ತಂಡದ ಈ ವರ್ಷದ ಹೊಸ ನಾಟಕ ಸಪ್ಟೆಂಬರ್ ತಿಂಗಳಲ್ಲಿ ಪ್ರಥಮ ಪ್ರದರ್ಶನ ಕಾಣಲಿರುವ “ಅಮ್ಮೆರ್ ” ನಾಟಕದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಮ್ಮ ತಂಡದ ಮತ್ತೊಬ್ಬ ಮೇರು ನಟ, ಅಮ್ಮ ಕಲಾವಿದರು ತಂಡದ ಸಾರಥ್ಯ ವಹಿಸಿರುವ ರಂಗ್ ದ ರಾಜೆ ಸುಂದರ್ ರೈ ಮಂದಾರ ಅವರ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಕಲಾಬಿರ್ಸೆ ದೀಪಕ್ ರೈ ಪಾಣಾಜೆ “ಅಮ್ಮೆರ್” ನಾಟಕದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಇವರಿಬ್ಬರ ಅಭಿನಯ ಮೋಡಿ ಮಾಡಲಿದ್ದು, ನಾಟಕ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ದೀಪಕ್ ರೈ ಪಾಣಾಜೆ ಅವರ ರಂಗ ಪಯಣ ಮತ್ತು ಸಿನಿ ಪಯಣ ನಿರಂತರವಾಗಿ ಮುಂದುವರಿಯಲಿ ಎಂಬುವುದು ಸುದ್ದಿಯ ಆಶಯ. ಅಂತೆಯೇ ಜನರದ್ದು ಕೂಡಾ.

LEAVE A REPLY

Please enter your comment!
Please enter your name here