ಜಾಗತಿಕ ಮಟ್ಟದಲ್ಲಿ ಅಕ್ಕಿ ಪೂರೈಕೆ ಕುಸಿತ – ಹೆಚ್ಚಿದ ಬೇಡಿಕೆ

ಮಂಗಳೂರು(ಮುಂಬೈ): ಜಾಗತಿಕ ಮಟ್ಟದಲ್ಲಿ ಅಕ್ಕಿ ಪೂರೈಕೆ ಗಣನೀಯ ಕುಸಿತ ಕಂಡ ಬೆನ್ನಲ್ಲೇ ಹಲವು ರಾಷ್ಟ್ರಗಳಲ್ಲಿ ಅಕ್ಕಿಯ ಬೇಡಿಕೆ ಹೆಚ್ಚಾಗಿದೆ. ಅಕ್ಕಿಯ ಉತ್ಪಾದನೆಯಲ್ಲಿ 20 ವರ್ಷಗಳಲ್ಲೇ ಇದು ದಾಖಲೆ ಕುಸಿತ ಎಂದು ವಿಶ್ಲೇಷಿಸಲಾಗಿದೆ.

ಜಾಗತಿ ಮಟ್ಟದಲ್ಲಿ 2022–23ರಲ್ಲಿ ಸುಮಾರು 8.7 ದಶಲಕ್ಷ ಟನ್‌ ನಷ್ಟು ಅಕ್ಕಿಯ ಉತ್ಪಾದನೆ ಕುಸಿತ ಕಂಡಿದೆ. ಇದರ ಬೆನ್ನಲ್ಲೇ ಜಗತ್ತಿನಲ್ಲೇ ಚೀನಾ ನಂತರ ಅತಿ ಹೆಚ್ಚು ಅಕ್ಕಿ ರಫ್ತು ಮಾಡುವ ಭಾರತದಲ್ಲೂ ಶೇ 40ರಷ್ಟು ಅಕ್ಕಿ ಉತ್ಪಾದನೆ ಕುಸಿತಗೊಂಡಿದೆ. ಇದರಿಂದಾಗಿ ಬಾಸುಮತಿ ಹಾಗೂ ಕುಚಲಕ್ಕಿ ಹೊರತುಪಡಿಸಿ ಉಳಿದ ಬಗೆಯ ಅಕ್ಕಿಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದರಿಂದಾಗಿ ಅಕ್ಕಿ ಬೆಲೆ ಏರುಮುಖವಾಗಿದೆ.

ಎಲ್‌ ನಿನೊದಿಂದ ಉಂಟಾಗಿರುವ ಮಳೆ ಅಭಾವ, ರಷ್ಯಾ– ಉಕ್ರೇನ್ ಯುದ್ಧ ಹಾಗೂ ಕೋವಿಡ್‌ನಿಂದಾಗಿ ಜಗತ್ತಿನ ಪ್ರಮುಖ ಮಾರುಕಟ್ಟೆಯಲ್ಲಿ ಅಕ್ಕಿ ಪೂರೈಕೆ ಕಡಿಮೆಯಾಗಿ ವ್ಯಾಪಕ ಬೇಡಿಕೆ ಹೆಚ್ಚಾಗಿದೆ. ಜಗತ್ತಿನಲ್ಲೇ ಅಕ್ಕಿ ಪೂರೈಕೆಯಲ್ಲಿ ಭಾರತ ಶೇ 40ರಷ್ಟು ಪಾಲನ್ನು ಹೊಂದಿದೆ. ಹೀಗಾಗಿ ಅಕ್ಕಿ ಆಮದು ಮೇಲೆ ಅವಲಂಬಿತ ರಾಷ್ಟ್ರಗಳಲ್ಲಿ ಹಾಹಾಕಾರ ಉಂಟಾಗಿದೆ. ಅಮೆರಿಕದಲ್ಲಿ ಮಳಿಗೆಗಳು ಹಾಗೂ ಸೂಪರ್‌ ಮಾರುಕಟ್ಟೆಯ ಎದುರು ಅಕ್ಕಿಗಾಗಿ ಸರತಿ ಸಾಲಿನಲ್ಲಿ ಜನರು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಆಫ್ರಿಕಾದ ರಾಷ್ಟ್ರಗಳು, ಟರ್ಕಿ, ಸಿರಿಯಾ, ಪಾಕಿಸ್ತಾನಗಳಿಗೂ ಅಕ್ಕಿಯ ಅಭಾವ ತೀವ್ರವಾಗಿ ಬಾಧಿಸಲಿದೆ ಎಂದು ಅಂದಾಜಿಸಲಾಗಿದೆ.

ಅಕ್ಕಿಯ ನುಚ್ಚು ರಫ್ತಿಗೂ ಭಾರತ ನಿರ್ಬಂಧ ಹೇರಿರುವುದರ ಜತೆಗೆ ರಫ್ತು ಮೇಲಿನ ತೆರಿಗೆಯನ್ನು ಶೇ 20ರಷ್ಟು ಹೆಚ್ಚಿಸಿದೆ. ಭಾರತವು ವಾರ್ಷಿಕ 10.3 ದಶಲಕ್ಷ ಟನ್‌ನಷ್ಟು ಅಕ್ಕಿಯನ್ನು (ಬಾಸುಮತಿ ಹೊರತುಪಡಿಸಿ) ರಫ್ತು ಮಾಡುತ್ತದೆ. ಥಾಯ್ಲೆಂಡ್‌, ವಿಯೆಟ್ನಾಂ, ಪಾಕಿಸ್ತಾನ ಹಾಗೂ ಅಮೆರಿಕಾ ಕೂಡಾ ಅಕ್ಕಿ ರಫ್ತು ಮಾಡುತ್ತಿದ್ದವು. ಆದರೆ ಅಲ್ಲಿಯೂ ಅಕ್ಕಿಯ ದಾಸ್ತಾನು ಕೊರತೆ ಉಂಟಾಗಿದೆ ಎಂದು ವರದಿಗಳು ಹೇಳಿವೆ.

ಟರ್ಕಿ, ಐರೋಪ್ಯ ಒಕ್ಕೂಟ ಹಾಗೂ ರಷ್ಯಾ ನಡುವಿನ ‘ಬ್ಲಾಕ್‌ ಸೀ ಗ್ರೇನ್‌ ಡೀಲ್‌’ ಈಗ ಉಕ್ರೇನ್‌ ಯುದ್ಧದಿಂದಾಗಿ ಮುರಿದುಬಿದ್ದಿದೆ. ಈ ಭಾಗದ ಕಣಜ ಎಂದೇ ಪರಿಗಣಿಸಲಾಗುತ್ತಿದ್ದ ಉಕ್ರೇನ್‌ನಲ್ಲಿ ಯುದ್ಧ ಪರಿಸ್ಥಿತಿ ಇರುವುದರಿಂದ ಗೋಧಿಯ ಬೆಲೆಯೂ ಹೆಚ್ಚಾಗಿದೆ.

ಭಾರತದಲ್ಲಿ ಅಕ್ಕಿಯ ಬೆಲೆ ಶೇ.14 ರಿಂದ 15ರಷ್ಟು ಹೆಚ್ಚಾಗಿದೆ. ಗೋಧಿ ಹಾಗೂ ಸಕ್ಕರೆ ರಫ್ತು ಪ್ರಮಾಣವನ್ನೂ ಭಾರತ ಕಡಿತಗೊಳಿಸಿದೆ. ಇದರಿಂದಾಗಿ ಈ ಎರಡರ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

LEAVE A REPLY

Please enter your comment!
Please enter your name here