ಇರುವೆ ಬಾಕ (Manis crassicaudata)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಚಿಪ್ಪು ಹಂದಿ ಕಾಣುವುದು ಬಹಳ ವಿರಳ (ಇರುವೆ ಬಾಕ). ಭಾರತದ ಕೆಲವು ಬೆಟ್ಟ ಪ್ರದೇಶಗಳಲ್ಲಿ, ಶ್ರೀಲಂಕಾ, ನೇಪಾಳ, ಪಾಕಿಸ್ತಾನದ ಕೆಲವೆಡೆ ಮಾತ್ರ ಕಾಣಸಿಗುವುದು.
ಸುಮಾರು 10-16 ಕೆ.ಜಿ ತೂಕವಿದ್ದು ಬಾಲದ ಅಳತೆ 33-47 ಸೆಂ.ಮೀ ಹಾಗೂ ದೇಹದ ಅಳತೆ 51-75 ಸೆಂ.ಮೀ ಇರುತ್ತದೆ. ಪಾಂಗೋಲಿನ್ ಪ್ರಭೇದಕ್ಕೆ ಸೇರಿದೆ, ದೇಹದ ಮೇಲೆ ರಕ್ಷಣೆಗಾಗಿ ಒಂದರ ಮೇಲೊಂದು ಚಿಪ್ಪುಗಳು ಇರುತ್ತವೆ. ಹುಲಿ, ಚಿರತೆ ಇತರೆ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಕೆಲವೊಮ್ಮೆ ಉಂಡೆಯಂತೆ ಸುರುಳಿ ಸುತ್ತಿಕೊಳ್ಳುವುದೂ ಉಂಟು.
ಈ ಚಿಪ್ಪುಗಳ ಬಣ್ಣ ಸುತ್ತಮುತ್ತಲಿನ ನೆಲ, ಅಲ್ಲಿನ ಮಣ್ಣಿಗೆ ತಕ್ಕಂತೆ ಇರುತ್ತದೆ. ಮುಂಗಾಲುಗಳಷ್ಟೆ ಉದ್ದವಾಗಿರುವ ಚೂಪಾದ ಉಗುರುಗಳು ಗೆದ್ದಲು ಹುಳು ಹಾಗೂ ಇರುವೆಗಳನ್ನು ತಮ್ಮ ಬಿಲ, ಗೂಡುಗಳಿಂದ ಹೊರತೆಗೆದು ತಿನ್ನಲು ಸಹಾಯಕಾರಿಯಾಗಿರುತ್ತದೆ. ಈ ಪಾಂಗೋಲಿನ್ ನಿಶಾಚರಿಯಾಗಿದ್ದು ಬೆಳಗಿನ ವೇಳೆಯಲ್ಲಿ ಆಳವಾದ ಬಿಲಗಳಲ್ಲಿ ನಿದ್ರಿಸುತ್ತದೆ. ತೇವ ಹಾಗೂ ಒಣ ಮುಳ್ಳುಗಾಡು ಪ್ರದೇಶಗಳಲ್ಲಿಯೂ ಹೊಂದಿಕೊಳ್ಳುತ್ತದೆ.
160-200 ಚಿಪ್ಪುಗಳನ್ನು ಹೊಂದಿದ್ದು ಸುಮಾರು 50% ಚಿಪ್ಪುಗಳು ಬಾಲದ ಭಾಗದಲ್ಲಿದೆ. ಈ ಚಿಪ್ಪುಗಳು ಮುಖದ ಮೇಲ್ಭಾಗ ಹಾಗೂ ದೇಹದ ಮೇಲ್ಭಾಗದಲ್ಲಿದೆ, ಉದರ ಹಾಗೂ ತೊಡೆಯ, ಕಾಲ್ಗಳ, ಒಳಭಾಗದಲ್ಲಿ ಇಲ್ಲ. ಚಿಪ್ಪುಗಳು 7 ಸೆಂ.ಮೀ ಉದ್ದ ಹಾಗೂ 8.5 ಸೆಂ.ಮೀ ಅಗಲ, 7-10ಗ್ರಾಂ ತೂಕವಿರುತ್ತದೆ.
ಗಂಡಿಗಿಂತ ಹೆಣ್ಣು ಗಾತ್ರದಲ್ಲಿ ಚಿಕ್ಕದು. (ಶಂಕು ಆಕಾರ) ಕೋನಾಕಾರದ ತಲೆ, ಹಾಗೂ ಉದ್ದ ಸುಂಡಿ(ಗುಲಾಬಿ-ಕಂದು ಮಿಶ್ರಿತ) ಹೊಂದಿರುತ್ತದೆ. ಕಣ್ಣಗಳು ಚಿಕ್ಕದಿರುತ್ತದೆ. ಇದರ ರುಚಿಕರವಾದ ಮಾಂಸಕ್ಕಾಗಿ ಹಾಗೂ ಇದರಿಂದ ಲಭ್ಯವಾಗುವ ಔಷಧೀಯ ಗುಣವುಳ್ಳ ಇದರ ಉಣ್ಣೆಗಾಗಿ ಈ ಪ್ರಾಣಿಯನ್ನು ಬೇಟೆಯಾಡುತ್ತಾರೆ.