ಮಂಗಳೂರು(ಕಾರವಾರ): ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಮಳೆ ಅಬ್ಬರ ಮುಂದುವರೆದಿದ್ದು ಹೊನ್ನಾವರದ ಗುಂಡಬಾಳ ನದಿಪಾತ್ರದ ಮನೆಗಳಿಗೆ ನೀರು ನುಗ್ಗಿದೆ.
ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಅದರ ಉಪನದಿ ಗುಂಡಬಾಳ ನದಿಯೂ ಉಕ್ಕಿ ಹರಿಯುತ್ತಿದ್ದು ನದಿಪಾತ್ರದ ಹತ್ತಾರು ಮನೆಗಳು ಜಲದಿಗ್ಬಂಧನಕ್ಕೆ ಒಳಪಟ್ಟಿವೆ. ಮಳೆ ನಿರಂತರ ಸುರಿದರೆ ಇಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜೊಯಿಡಾ ಕುಂಬಾರವಾಡಾ ಮಾರ್ಗ ಮಧ್ಯದ ದೊಣಪಾದಲ್ಲಿ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿ ಮೇಲೆ ಮರ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಮರ ಬಿದ್ದರೂ ರಸ್ತೆಯ ಒಂದು ಬದಿಯಿಂದ ಸಾಗಲು ಯತ್ನಿಸಿದ ಪ್ರವಾಸಿಗರು ತುಂಬಿದ್ದ ಬಸ್ ಕೆಸರಿನಲ್ಲಿ ಸಿಲುಕಿಕೊಂಡಿತು. ಇದರಿಂದ ಈ ಮಾರ್ಗದಲ್ಲಿ ಕೆಲವು ತಾಸು ಸಂಚಾರ ಸ್ಥಗಿತಗೊಂಡಿತು.
ಜೊಯಿಡಾ, ಯಲ್ಲಾಪುರ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೂಪಾ, ಕದ್ರಾ, ಕೊಡಸಳ್ಳಿ ಜಲಾಶಯಗಳಿಗೆ ನೀರಿನ ಹರಿವಿನ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಕದ್ರಾ ಜಲಾಶಯಕ್ಕೆ 47 ಸಾವಿರ ಕ್ಯೂಸೆಕ್, ಸೂಪಾ ಜಲಾಶಯಕ್ಕೆ 51 ಸಾವಿರ ಕ್ಯೂಸೆಕ್, ಕೊಡಸಳ್ಳಿ ಜಲಾಶಯಕ್ಕೆ 17 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕದ್ರಾ ಜಲಾಶಯದಿಂದ ಆರು ಕ್ರಸ್ಟ್ ಗೇಟ್‍ಗಳ ಮೂಲಕ 35 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.