ಮಂಗಳೂರು: ಬಿಜೆಪಿಗೆ ರಾಜ್ಯಾಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾದ ಕ್ಷಣದಿಂದ ಕಾಂಗ್ರೆಸ್ ಸರ್ಕಾರದ ಪತನದ ಮುಹೂರ್ತ ಆರಂಭವಾಗಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್‍ನಲ್ಲಿರುವ ಕೆಲವು ಅಸಮಾಧಾನಿತ ನಾಯಕರ ಜೊತೆ ಬಿಜೆಪಿಯ 2ನೇ ಹಂತದ ನಾಯಕರು ನಿರಂತರ ಮಾತುಕತೆ ನಡೆಸಿದ್ದು, ನಿಮ್ಮ ರಾಜಕೀಯ ನಿರ್ಧಾರಗಳು ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿವೆ ಎಂಬ ಸೂಚ್ಯವಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ.
ತಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿ ಎಂದು ಹೇಳುವ ಬಿಜೆಪಿ ನಾಯಕರು ಅವರ ಕುಟುಂಬ ಸದಸ್ಯರ ಜೊತೆ, ಆತ್ಮೀಯರ ಜೊತೆ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ. ಈ ನಡುವೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಿಸಿದ್ದು, ಪಕ್ಷೇತರರು ಸೇರಿದಂತೆ ಸಂಖ್ಯಾಬಲ 138 ಸ್ಥಾನವನ್ನು ಹೊಂದಿದೆ. ಸದ್ಯಕ್ಕೆ ಸರ್ಕಾರವನ್ನು ಅಷ್ಟು ಸುಲಭದಲ್ಲಿ ಅಸ್ಥಿರಗೊಳಿಸುವುದು ಸಾಧ್ಯವಿಲ್ಲ ಎಂಬ ಚರ್ಚೆಗಳು ಪಕ್ಷ ಮತ್ತು ಸಾರ್ವಜನಿಕ ವಲಯದಲ್ಲಿದೆ.
ಆದರೆ ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ಶಾಸಕರ ಜೊತೆ ಅದರಲ್ಲೂ ಸಚಿವ ಸಂಪುಟದಲ್ಲಿ ಅವಕಾಶ ಸಿಗದೆ ಅಸಮಾಧಾನಗೊಂಡಿರುವವರೊಂದಿಗೆ ಪದೇ ಪದೇ ಚರ್ಚೆ ನಡೆಸುತ್ತಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ. ರಾಜಕೀಯ ಪಕ್ಷದಲ್ಲಿ ಅತೃಪ್ತಿ, ಅಸಮಾಧಾನಗಳು ಸಹಜ. ಪ್ರತಿಯೊಬ್ಬರಿಗೂ ಉನ್ನತ ಸ್ಥಾನ ಗಳಿಸಬೇಕೆಂಬ ಆಕಾಂಕ್ಷೆ ಇರುತ್ತದೆ. ಅದಕ್ಕೆ ಅನುಗುಣವಾಗಿ ಅವಕಾಶಗಳು ಇರುವುದಿಲ್ಲ. ಕುಟುಂಬ ರಾಜಕಾರಣ, ಸೃಜನ ಪಕ್ಷಪಾತ, ಗುಂಪುಗಾರಿಕೆಯಿಂದಾಗಿ ಬಹಳಷ್ಟು ಮಂದಿ ಮೂಲೆ ಗುಂಪಾಗಿದ್ದಾರೆ. ಆದರೂ ಮುಂದಿನ ದಿನಗಳಲ್ಲಿ ಪಕ್ಷದಿಂದ ಉತ್ತಮ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕೆಲವರು ಕಾದು ನೋಡುತ್ತಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಮೂರು ಬಾರಿ ಆಪರೇಷನ್ ಕಮಲ ನಡೆಸಿ ಯಶಸ್ವಿಯಾಗಿರುವ ಬಿಜೆಪಿಯವರು ನಾಲ್ಕನೇ ಬಾರಿಗೆ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಈವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗಿಲ್ಲ ಎನ್ನುವುದು ಸತ್ಯ. ಕಾಂಗ್ರೆಸಿಗರು ಇದೇ ವಿಚಾರವನ್ನು ಲೇವಡಿ ಮಾಡುತ್ತಾ ಅದೇ ಗುಂಗಿನಲ್ಲಿ ಮೈಮರೆಯುತ್ತಿದ್ದಾರೆ ಎನ್ನಲಾಗುತ್ತಿರುವುದರ ನಡುವೆಯೇ ಬಿಜೆಪಿ ಸದ್ದಿಲ್ಲದೆ ಕೆಲವು ಅತೃಪ್ತ ನಾಯಕರನ್ನು ಸಂಪರ್ಕಿಸಿ ಹಲವು ರೀತಿಯ ಆಮಿಷಗಳನ್ನು ಒಡ್ಡುತ್ತಿರುವುದಾಗಿ ತಿಳಿದುಬಂದಿದೆ.
2019ರಲ್ಲಿ ಇದೇ ರೀತಿ ಅತೃಪ್ತಗೊಂಡು ಬಿಜೆಪಿ ಸೇರಿದ್ದರಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡಿತ್ತು. ಈಗ ಕಾಂಗ್ರೆಸ್ ಸುಭದ್ರ ಸ್ಥಿತಿಯಲ್ಲಿದ್ದು, ಆಪರೇಷನ್ ಕಮಲ ಕಷ್ಟಸಾಧ್ಯ ಎಂಬ ಚರ್ಚೆಗಳಿವೆ.
ಆದರೆ ಕಾಂಗ್ರೆಸ್‍ನ ಅತೃಪ್ತ ಆತ್ಮಗಳನ್ನು ಸಂಪರ್ಕಿಸುತ್ತಿರುವ ಸಂಘ ಪರಿವಾರ ಹಾಗೂ ಬಿಜೆಪಿ ನಾಯಕರು, ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ ಸಮಯ ಬಂದಾಗ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ. ಇದು ಆಪರೇಷನ್ ಕಮಲದ ಮತ್ತೊಂದು ಪ್ರಯತ್ನ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬಲವಾದ ನಾಯಕತ್ವ ಇರುವುದರಿಂದ ಸರ್ಕಾರವನ್ನು ಅಸ್ಥಿರಗೊಳಿಸುವುದು ಅಷ್ಟು ಸುಲಭ ಸಾಧ್ಯವಲ್ಲ ಎಂಬುವುದು ದಿಟವಾದರೂ ರಾಜಕೀಯದಲ್ಲಿ ಬದಲಾವಣೆ ಸಹಜ. ಕಾಂಗ್ರೆಸ್‍ನಲ್ಲಿ ನಾಯಕತ್ವದ ಬದಲಾವಣೆಯ ಹಗ್ಗ ಜಗ್ಗಾಟಕ್ಕೂ ಮೊದಲೇ ಆಪರೇಷನ್ ಕಮಲ ನಡೆದು ಸರ್ಕಾರ ಅಸ್ಥಿರಗೊಳ್ಳಬಹುದೇ ಎಂಬ ಅನುಮಾನಗಳು ಸೃಷ್ಟಿಯಾಗಿವೆ. ಇದನ್ನು ಪುಷ್ಠೀಕರಿಸುವಂತೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಪಕ್ಷವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದ್ದು ನನ್ನ ಗಮನಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ಅಲ್ಲದೇ, ಮೊನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ನನಗೆ ಮುಖ್ಯಮಂತ್ರಿ ಮಾಡೋದು ಚೆನ್ನಾಗಿ ಗೊತ್ತಿದೆ. ಮುಖ್ಯಮಂತ್ರಿಗಳನ್ನು ಕೆಳಗೆ ಇಳಿಸೋದು ಗೊತ್ತಿದೆ, ನಾನು ಯಾರ ಬಳಿಯೂ ಭಿಕ್ಷೆ ಬೇಡೋದಿಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ಇಲ್ಲ ಅಂದಿದ್ದರೇ ಬೆಂಗಳೂರಿನಲ್ಲಿ 49 ವರ್ಷ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ನಮ್ಮನ್ನು ಓಡಿಸಿ ಬಿಡುತ್ತಿದ್ದರು ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡಿದ ರಾಜ್ಯ ಸರಕಾರ ಮುಂದಿನ 5 ವರ್ಷ ಸರಕಾರ ಸುಭದ್ರವಾಗಿರುತ್ತೆ ಎನ್ನುವ ಬಗ್ಗೆ ಮತದಾರನಿಗೆ ಗ್ಯಾರಂಟಿ ನೀಡಬೇಕಾಗಿದೆ.