ಮಂಗಳೂರು(ಬೆಂಗಳೂರು): ಬಜೆಟ್ ಘೋಷಣೆಯಂತೆ ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ಜು.24ರ ಸೋಮವಾರದಿಂದ ಜಾರಿಯಾಗಿದೆ. ಇದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹472 ಕೋಟಿ ಹೆಚ್ಚುವರಿ ವರಮಾನ ಸಂಗ್ರಹಿಸುವ ಗುರಿ ಹೊಂದಲಾಗಿದೆ.
ಆಯ್ದ ವಾಹನಗಳ ತೆರಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಅದಕ್ಕೆ ಪೂರಕವಾಗಿ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ತಿದ್ದುಪಡಿ ಮಸೂದೆ–2023 ಕ್ಕೆ ವಿಧಾನಮಂಡಲದ ಒಪ್ಪಿಗೆ ಪಡೆಯಲಾಗಿತ್ತು.
ಶಾಲೆ, ಕಾಲೇಜುಗಳ ವಾಹನಗಳು, ಅತಿ ಭಾರದ ಸರಕು ಸಾಗಣೆ ವಾಹನಗಳು, ಮೋಟಾರು ಕ್ಯಾಬ್‌ಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ಶಾಲೆಗಳ ಒಡೆತನದಲ್ಲಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್‌ಗೆ ತೆರಿಗೆಯನ್ನು ₹20 ರಿಂದ ₹100ಕ್ಕೆ ಏರಿಕೆ ಮಾಡಲಾಗಿದೆ. ಇತರ ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್ ವಿಸ್ತೀರ್ಣದ ತೆರಿಗೆಯನ್ನು ₹80 ರಿಂದ ₹200ಕ್ಕೆ ಹೆಚ್ಚಿಸಲಾಗಿದೆ. ಹೊರುವ ಭಾರವೂ ಸೇರಿದಂತೆ ಒಟ್ಟು ತೂಕ 1.5 ಟನ್‌ನಿಂದ 5.5 ಟನ್‌ಗಳವರೆಗೆ ಮಾತ್ರ ಇರುವ ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪಡೆಯಲಾಗುತ್ತಿತ್ತು. ಅದಕ್ಕಿಂತ ಹೆಚ್ಚಿನ ಭಾರದ ವಾಹನಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿಸಬೇಕಿತ್ತು. ಈಗ 1.5 ಟನ್‌ನಿಂದ 12 ಟನ್‌ಗಳವರೆಗಿನ ತೂಕದ ವಾಹನಗಳಿಗೂ ಪೂರ್ಣಾವಧಿ ತೆರಿಗೆ ಸಂಗ್ರಹಿಸಲಾಗುತ್ತದೆ.
₹15 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕ್ಯಾಬ್‌ಗಳಿಗೆ ಮಾತ್ರ ಆ ವಾಹನದ ಮೌಲ್ಯದ ಶೇಕಡ 15ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ₹10 ಲಕ್ಷದಿಂದ ₹15 ಲಕ್ಷದವರೆಗಿನ ಬೆಲೆಯ ಕ್ಯಾಬ್‌ಗಳಿಗೆ ಅವುಗಳ ಮೌಲ್ಯದ ಶೇ 9ರಷ್ಟು ತೆರಿಗೆ ವಿಧಿಸಲಾಗುತ್ತದೆ. ₹15 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕ್ಯಾಬ್‌ಗಳಿಗೆ ಈ ಹಿಂದಿನಂತೆಯೇ ಅವುಗಳ ಮೌಲ್ಯದ ಶೇ 15ರಷ್ಟು ತೆರಿಗೆ ವಿಧಿಸಲಾಗುತ್ತದೆ.
ವಾಹನ ತೆರಿಗೆ ಏರಿಕೆ ವಿವರ:
ವರ್ಗ ಹಿಂದಿನ ತೆರಿಗೆ ದರ ಪರಿಷ್ಕೃತ ತೆರಿಗೆ ದರ
1.5 ಟನ್ ನಿಂದ 2 ಟನ್ ರೂ.10,000 ರೂ.20,000
2.0 ಟನ್ ನಿಂದ 3 ಟನ್ ರೂ.15,000 ರೂ.30,000
3.0 ಟನ್ ನಿಂದ 5.5 ಟನ್ ರೂ.20,000 ರೂ.40,000
5.5 ಟನ್ ನಿಂದ 7.5 ಟನ್ ವರ್ಷಕ್ಕೆ 7,200 ಪೂರ್ಣಾವಧಿಗೆ 60,000
7.5 ಟನ್ ನಿಂದ 9.5 ಟನ್ ವರ್ಷಕ್ಕೆ 7,200 ಪೂರ್ಣಾವಧಿಗೆ 80,000
9.5 ಟನ್ ನಿಂದ 12 ಟನ್ ವರ್ಷಕ್ಕೆ 7,200 ಪೂರ್ಣಾವಧಿಗೆ 1,00,000