ವೈದರ ನಿರ್ಲಕ್ಷ್ಯ ಗರ್ಭಿಣಿ ಸಾವು-ಆಸ್ಪತ್ರೆ ಮುಂಭಾಗ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

ಮಂಗಳೂರು: ಖಾಸಗಿ ಆಸ್ಪತ್ರೆ ‌ನಿರ್ಲಕ್ಷ್ಯದಿಂದ ಗರ್ಭಿಣಿ ಸಾವನ್ನಪ್ಪಿರುವುದಾಗಿ ಆರೋಪಿಸಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ‌‌ ಕುಟುಂಬಸ್ಥರು ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಶಿಲ್ಪಾ ಆಚಾರ್ಯ (36) ಮೃತಪಟ್ಟ ಗರ್ಭಿಣಿ, ಜುಲೈ 2ರಂದು ಹೆರಿಗೆ ನೋವು ಹಿನ್ನೆಲೆ ಶಿಲ್ಪಾ ಆಸ್ಪತ್ರೆಗೆ ದಾಖಲಾಗಿದ್ದರು, ಆವತ್ತು ಸಿಸೇರಿಯನ್ ಮಾಡಿ ಡೆಲಿವರಿ ಮಾಡಬೇಕೆಂದು  ಕರ್ತವ್ಯದಲ್ಲಿದ್ದ ವೈದ್ಯರು ತಿಳಿಸಿದ್ದರು.

ಸಿಸೇರಿಯನ್‌ ಮಾಡಲು ವೈದ್ಯೆ ವೀಣಾಗೆ ಕರೆ ಮಾಡಿದಾಗ, ಆಕೆ ಭಾನುವಾರವಾದ ಕಾರಣ  ಬರಲ್ಲ ಎಂದಿದ್ದರು, ಹೀಗಾಗಿ ಅದೇ ದಿನ ಡಾ.ವೀಣಾ ಅನುಪಸ್ಥಿತಿಯಲ್ಲಿ ಶಿಲ್ಪಾಗೆ ಬೇರೆ ವೈದ್ಯರು ಸಿಸೇರಿಯನ್ ಮಾಡಿ ಡೆಲಿವರಿ ಮಾಡಿದ್ದಾರೆ. ಹೆಣ್ಣು ಮಗು ಆಗಿದೆ, ಆದರೆ ಗರ್ಭಕೋಶವನ್ನು ತೆಗೆಯಬೇಕಾಗುತ್ತದೆ ಎಂದು ಸಿಸೇರಿಯನ್‌ ಮಾಡಿದ ವೈದ್ಯರು ಹೇಳಿದ್ದಾರೆ. ಎರಡು ದಿನಗಳ ನಂತರ ಶಿಲ್ಪಾಗೆ ಜ್ವರ ಬಂದಿದ್ದು ಚಿಕಿತ್ಸೆ ನೀಡಲಾಗಿದೆ. 5 ದಿನಗಳ ನಂತರ ವೈದ್ಯರು ಶಿಲ್ಪಾ ಬ್ರೈನ್ ಡ್ಯಾಮೇಜ್ ಆಗಿದೆ ಎಂದಿದ್ದಾರೆ. ಬಳಿಕ ಜುಲೈ 25 ರಂದು ಐಸಿಯುನಲ್ಲಿ ಶಿಲ್ಪಾ ಸಾವನ್ನಪ್ಪಿದ್ದಾಗಿ ಮಾಹಿತಿ ನೀಡಿದ್ದಾರೆ.

ಈ ಸಾವಿಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಬೇರೆ ವೈದ್ಯರಿಂದ ಡೆಲಿವರಿ ಮಾಡಿಸಿದ್ದನ್ನು ಆರೋಪಿಸಿ ಶಿಲ್ಪಾ ಪತಿ ಪ್ರದೀಪ್ ಆಚಾರ್ಯ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎ.ಜೆ ಆಸ್ಪತ್ರೆಯ ವೈದ್ಯರಾದ ವೀಣಾ ಭಗವಾನ್ ಹಾಗೂ ಡೀನ್ ಅಶೋಕ ಹೆಗಡೆ, ಅನಸ್ತೇಶಿಯಾ ಡಾ.ಗುರುರಾಜ್ ತಂತ್ರಿ, ಆಡಳಿತ ವರ್ಗ ಹಾಗೂ ಸಿಬ್ಬಂದಿಗಳ ನಿರ್ಲಕ್ಷತನವೇ ಕಾರಣ ಎಂದು ದೂರು ನೀಡಿದ್ದಾರೆ. ಸದ್ಯ 174(3)(vi) ಸಿ.ಆರ್‌.ಪಿ‌.ಸಿ ಯಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂದು ಮರಣೋತ್ತರ‌ ಪರೀಕ್ಷೆಗಾಗಿ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಮೃತದೇಹ ರವಾನಿಸಲು ಮುಂದಾದಾಗ, ಸಂಬಂಧಿಕರು ಮತ್ತು ಸಾರ್ವಜನಿಕರು ಮೃತದೇಹ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಯ ಮಧ್ಯೆ ಪ್ರತಿಭಟನೆ ನಡೆಸಿ, ಆಸ್ಪತ್ರೆ ಆಡಳಿತ ಮಂಡಳಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿ  ಅಂಬ್ಯುಲೆನ್ಸ್ ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ನೂಕಾಟವಾಗಿದೆ. ಪೊಲೀಸರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೂ ಪೊಲೀಸ್ ಬಲ ಪ್ರಯೋಗಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದಾರೆ.

LEAVE A REPLY

Please enter your comment!
Please enter your name here