ಪುತ್ತೂರು: ಚೆಂಬು ಗ್ರಾಮದ ಕುದ್ರೆಪಾಯದಲ್ಲಿ 2 ವಾರಗಳ ಹಿಂದೆ ಸಹೋದರರಿಂದಲೇ ಹತ್ಯೆಯಾದ ಉಸ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಉಸ್ಮಾನ್‌ರನ್ನು ಕೊಲೆಗೈಯ್ಯಲು ಆತನ ಸಹೋದರಾದ ರಫೀಕ್ ಮತ್ತು ಸತ್ತಾರ್ ಬಳಸಿ ಚೂರಿಯನ್ನು ಅರಂತೋಡಿನಲ್ಲಿರುವ ಅವರ ಸಹೋದರ ಮಾಯಿನ್ ಕುಟ್ಟಿಯವರ ಪುತ್ರ ಮುಬಾರಕ್ ಒದಗಿಸಿದ್ದನೆಂದು ಪೊಲೀಸರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ಮುಬಾರಕ್(37ವ) ಸುಳ್ಯ ಜೂನಿಯರ್ ಕಾಲೇಜು ಸಮೀಪದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದರು. ಕೊರೋನಾ ಕಾಲದ ಬಳಿಕ ಬೇಕರಿ ಬಂದ್ ಮಾಡಿ ಊರಿಗೆ ಬಂದು ನೆಲೆಸಿರುವ ಅವರಲ್ಲಿ ಬೇಕರಿಯ ಬ್ರೆಡ್ ಮತ್ತಿತರ ವಸ್ತುಗಳನ್ನು ಕತ್ತರಿಸುವ ಗಟ್ಟಿಯಾದ ಚೂರಿ ಇತ್ತೆನ್ನಲಾಗಿದೆ. ತನ್ನ ಚಿಕ್ಕಪ್ಪ ಮತ್ತು ದೊಡ್ಡಪ್ಪ ಕೇಳಿದ ಮೇರೆಗೆ ಕೊಲೆ ನಡೆಯುವ ಹಿಂದಿನ ದಿನ ಮುಬಾರಕ್ ಆ ಚೂರಿಯನ್ನು ಅವರಿಗೆ ಕೊಟ್ಟಿದ್ದನೆಂದು ಹೇಳಲಾಗಿದೆ.
ಕೊಲೆ ಪ್ರಕರಣದ ತನಿಖಾಧಿಕಾರಿಯಾದ ಮಡಿಕೇರಿ ಸರ್ಕಲ್ ಇನ್‌ಸ್ಪೆಕ್ಟರ್ ಉಮೇಶ್ ಉಪ್ಪಳಿಕೆಯವರು ಜು.27ರಂದು ಸುಳ್ಯಕ್ಕೆ ದಾಳಿ ನಡೆಸಿ ಮುಬಾರಕ್‌ನನ್ನು ಬಂಧಿಸಿದರು. ನಿನ್ನೆ ಆರೋಪಿಯನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.