ಮಂಗಳೂರು(ಬೆಂಗಳೂರು): ಕರಾವಳಿಯ ಜನಪದ ಸಾಂಪ್ರಾದಾಯಿಕ ಸಾಂಸ್ಕೃತಿಕ ಕ್ರೀಡೆ ಕಂಬಳ ಮೊದಲ ಬಾರಿಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ.
ಬೆಂಗಳೂರು ತುಳು ಕೂಟದ ಸುವರ್ಣಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ತುಳುನಾಡಿನ ಜನಪ್ರಿಯ ಜನಪದ ಕ್ರೀಡೆಯಾದ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಮುಂದಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಕಂಬಳ ಕೂಟದ ನೇತೃತ್ವವನ್ನು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ವಹಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ತುಳುಕೂಟ 50 ವರ್ಷವನ್ನು ಪೂರ್ಣಗೊಳಿಸಿದ್ದು, ಮುಂದಿನ ನವೆಂಬರ್ ತಿಂಗಳಲ್ಲಿ ಸುವರ್ಣಮಹೋತ್ಸವವನ್ನು ವಿಶ್ವ ತುಳು ಸಮ್ಮೇಳನ ನಡೆಸುವ ಮೂಲಕ ವಿಜೃಂಭನೆಯಿಂದ ಆಚರಿಸಲು ಮುಂದಾಗಿದೆ. ಇದರೊಂದಿಗೆ ಕಂಬಳಕೂಟವನ್ನು ಆಯೋಜಿಸಲು ತುಳುಕೂಟ ನಿರ್ಧರಿಸಿದೆ.
ಅರಮನೆ ಮೈದಾನದಲ್ಲಿ ನಡೆಸಲುದ್ದೇಶಿಸಿದ ಕಂಬಳಕ್ಕೆ ‘ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಜೊಡುಕರೆ ಕಂಬಳ’ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಉಪ್ಪಿನಂಗಡಿಯ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ , ಮತ್ತು ತುಳುಕೂಟದ ಪ್ರಮುಖರು ಜೋಡುಕರೆ ನಿರ್ಮಿಸುವ ಜಾಗದ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಒಡೆಯರ್ ಕುಟುಂಬಕ್ಕೆ ಸೇರಿದ ಅರಮನೆ ಮೈದಾನದಲ್ಲಿ ಕಂಬಳ ಕ್ರೀಡಾಕೂಟವನ್ನು ನಡೆಸಲು ಮಾಹಾರಾಣಿ ಪ್ರಮೋದ ದೇವಿ ಸಹಿತ ಯುವರಾಜ ಯದುವೀರ್ ಅನುಮತಿ ನೀಡಿದ್ದು, ಸರಕಾರದ ಅನುಮತಿಯಷ್ಟೇ ಬಾಕಿಯಿದೆ.
ಸೆಮಿಫೈನಲ್ ಹಂತಕ್ಕೆ ಬಂದ 50 ಜೋಡಿ ಕೋಣಗಳನ್ನು ಬೆಂಗಳೂರಿನ ಕಂಬಳ ಕೂಟದಲ್ಲಿ ಓಡಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಕೋಣಗಳ ಸಾಗಾಟದ ಬಗ್ಗೆ ಮಾತುಕತೆ ನಡೆಯುತ್ತಿದೆ.ಬೆಂಗಳೂರಿಗೆ ಕೋಣಗಳನ್ನು ಲಾರಿಯಲ್ಲಿ ಸಾಗಾಟ ಮಾಡುವುದು ದುಬಾರಿಯಾಗಲಿದ್ದು, ರೈಲಿನಲ್ಲಿ ಸಾಗಿಸುವ ಬಗ್ಗೆ ಮಾತುಕತೆ ನಡೆದಿದೆ. ಈ ಕುರಿತಂತೆ ತುಳುನಾಡಿನ ಕಂಬಳ ಸಮಿತಿ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮುಂದಿನ ಯೋಜನೆ ಹಾಕಿಕೊಳ್ಳಲು ತುಳುಕೂಟ ತೀರ್ಮಾನಿಸಿದೆ.
ದಕ್ಷಿಣ ಕನ್ನಡದ ನೀರಿನಲ್ಲಿ ಓಡಿ , ಕುಡಿದು ಅಭ್ಯಾಸವಿರುವ ಕೋಣಗಳು ಬೆಂಗಳೂರಿನ ಗಡಸು ನೀರನ್ನು ಸೇವಿಸಬಹುದೇ ಎನ್ನುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಬೆಂಗಳೂರಿನ ನೀರನ್ನು ಈಗಾಗಲೇ ಪುಣೆ ಮತ್ತು ಬೆಂಗಳೂರಿನ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿದೆ. ಕರಾವಳಿಯಲ್ಲಿ ನಡೆಯುವ ಕಂಬಳಕ್ಕಿಂತ ಒಂದು ಅಡಿಯಾದರೂ ಎತ್ತರದ ಕರೆ ನಿರ್ಮಿಸಿ ಅದ್ದೂರಿಯಾಗಿ ಕಂಬಳಕೂಟವನ್ನು ಆಯೋಜಿಸುವ ಅಭಿಲಾಷೆಯನ್ನು ಶಾಸಕ ಅಶೋಕ್ ಕುಮಾರ್ ರೈ ಮತ್ತು ಬೆಂಗಳೂರು ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಹೊಂದಿದ್ದಾರೆ.
ದೇಶದ ಯಾವೂದೇ ರಾಜರು ನೀಡದಷ್ಟು ಕೊಡುಗೆ ರಾಜ್ಯಕ್ಕೆ ಮೈಸೂರು ಒಡೆಯರ್ ನೀಡಿರುವುದರಿಂದ ಐತಿಹಾಸಿಕ ಕಂಬಳಕ್ಕೆ ಅವರ ಹೆಸರೇ ಇಡಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ 35 ಎಕ್ರೆ ವಿಸ್ತೀರ್ಣದಲ್ಲಿ ಮೂರು ದಿನ ಕಾರ್ಯಕ್ರಮ ನಡೆಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದ್ದು, ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಬೆಂಗಳೂರಿನ ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್, ಸಂಪತ್ ಕುಮಾರ್ ಎಸ್, ಬೆಂಗಳೂರು ತುಳುಕೂಟ ಅಧ್ಯಕ್ಷ ಸುಂದರ್ ರಾಜ್ ರೈ , ಬೆಂಗಳೂರು ಬಂಟ್ಸ್ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಮಾಜಿ ಅಧ್ಯಕ್ಷ ಜಯರಾಮ ಸೂಡ ಹಾಗೂ ಪ್ರಮುಖರು ಸ್ಥಳ ವೀಕ್ಷಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.