ಮಂಗಳೂರು(ಬೆಂಗಳೂರು): ಇಸ್ರೋದ ಚಂದ್ರಯಾನ-3 ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿದೆ. ಈ ಕುರಿತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ತಿಳಿಸಿದ್ದು, ಚಂದ್ರನ ಕಕ್ಷೆಗೆ ಅಂತಿಮ ಪರಿಚಲನೆಯು ಪೂರ್ಣಗೊಂಡಿದೆ ಎಂದು ಹೇಳಿದೆ.
ಆಗಸ್ಟ್ 17ಕ್ಕೆ ಲ್ಯಾಂಡರ್ ಮಾಡ್ಯೂಲ್ ನಿಂದ ಪ್ರೊಪಲ್ಷನ್ ಮಾಡ್ಯೂಲ್ ಪ್ರತ್ಯೇಕಿಸುವ ಮುಹೂರ್ತ ನಿಗದಿಯಾಗಿದೆ. ಆ ಮೂಲಕ ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ನೌಕೆ ಆಗಸ್ಟ್ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಅದಾದ ಬಳಿಕ ಸತತ ಮೂರು ಕಕ್ಷೆ ಪರಿಚಲನೆ ಮೂಲಕ (ಆಗಸ್ಟ್ 6, 9 ಹಾಗೂ 14) ಚಂದ್ರನ ಮೇಲ್ಮೈಯ ಸನಿಹಕ್ಕೆ ತಲುಪಿದೆ. ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಯೋಜಿಸಲಾಗಿದೆ.