ಮಂಗಳೂರು(ಹೊಸದಿಲ್ಲಿ): ಈ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ 3,446 ರೋಗಿಗಳ ಚಿಕಿತ್ಸೆಗೆ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಒಟ್ಟು 6.97 ಕೋಟಿ ಮೊತ್ತವನ್ನು ಪಾವತಿಸಲಾಗಿದೆ ಎಂದು ಭಾರತೀಯ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಎತ್ತಿ ತೋರಿಸಲಾಗಿದೆ. 2018ರಲ್ಲಿ ಜಾರಿಗೊಂಡ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಥವಾ ಪಿಎಂಜೆಎವೈ ಯೋಜನೆಯು ಬಡಜನರಿಗೆ ಆರೋಗ್ಯ ವಿಮೆ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಈ ಯೋಜನೆಯು ಬಡ ಕುಟುಂಬಗಳಿಗೆ ರೂ. 5 ಲಕ್ಷ ಆರೋಗ್ಯ ವಿಮೆಯ ಕೊಡುಗೆಯನ್ನು ನೀಡುತ್ತದೆ.
ವಹಿವಾಟು ನಿರ್ವಹಣಾ ವ್ಯವಸ್ಥೆಯಲ್ಲಿ ಅದಾಗಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿರುವ ರೋಗಿಗಳಿಗೆ ಈ ಯೋಜನೆಯಡಿ ಚಿಕಿತ್ಸೆ ಮುಂದುವರಿಸಿರುವುದನ್ನು ತಮ್ಮ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯಲ್ಲಿ ಭಾರತೀಯ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ಗುರುತಿಸಿದ್ದಾರೆ. 3,446 ರೋಗಿಗಳ ಪೈಕಿ 3,903 ರೋಗಿಗಳು ಇಂತಹ ಲಾಭ ಪಡೆದಿರುವುದನ್ನು ಗುರುತಿಸಲಾಗಿದೆ ಎಂದೂ ಮಹಾ ಲೆಕ್ಕಪರಿಶೋಧಕರು ಹೇಳಿದ್ದಾರೆ. 2020ರ ಆರಂಭದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಮೃತ ರೋಗಿಗಳನ್ನು ನೋಂದಾಯಿಸುವುದರಲ್ಲೂ ನ್ಯೂನತೆ ಹೊಂದಿದ್ದರತ್ತ ಭಾರತೀಯ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯು ಬೊಟ್ಟು ಮಾಡಿದೆ. ಸರಿಪಡಿಸುವ ಕ್ರಮಗಳನ್ನು ಅನುಷ್ಠಾನಗೊಳಿಸಿರುವ ಹೊರತಾಗಿಯೂ, ಈ ಹಿಂದೆ ಮೃತಪಟ್ಟಿದ್ದಾರೆ ಎಂದು ನಮೂದಿಸಲಾಗಿರುವ ರೋಗಿಗಳು ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ವಹಿವಾಟು ನಿರ್ವಹಣಾ ವ್ಯವಸ್ಥೆ ಅವಕಾಶ ಒದಗಿಸಿದೆ ಎಂದು ನಿಯಂತ್ರಕರು ಹಾಗೂ ಮಹಾ ಲೆಕ್ಕಪರಿಶೋಧಕರೂ ಕೂಡಾ ಹೇಳಿದ್ದಾರೆ. ಪಿಎಂಜೆಎವೈ ಯೋಜನೆಯಡಿ 7.5 ಲಕ್ಷ ಫಲಾನುಭವಿಗಳು ಕೇವಲ ಒಂದೇ ಮೊಬೈಲ್ ಫೋನ್ ನಂಬರ್ (9999999999) ಮೂಲಕ ನೋಂದಾಯಿಸಿಕೊಂಡಿದ್ದಾರೆ ಎಂದೂ ಕಳೆದ ವಾರ ವರದಿಯಾಗಿತ್ತು.