ಮಂಗಳೂರು(ಬಂಟ್ವಾಳ): ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ಪೂರೈಕೆಯಾದ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಸುಮಾರು 40 ಲೋಡ್ ಅಕ್ಕಿಯ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಭಾರೀ ಅವ್ಯವಹಾರದ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಮಂಗಳೂರಿನ ಸಹಾಯಕ ಆಯುಕ್ತ ಹಾಗೂ ತಾಲೂಕು ದಂಡಾಧಿಕಾರಿಯವರು ಬಂಟ್ವಾಳದ ಬಿ.ಸಿ.ರೋಡು ತಲಪಾಡಿ ಎಂಬಲ್ಲಿರುವ ಆಹಾರ ನಿಗಮದ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನಲ್ಲಿರುವ ಭಾರತೀಯ ಆಹಾರ ನಿಗಮದ ಗೋದಾಮಿನಿಂದ ಬಂಟ್ವಾಳದ ಬಿ.ಸಿ. ರೋಡ್ ನ ಗೋದಾಮಿಗೆ ಸರಬರಾಜು ಆಗಿರುವ ಸುಮಾರು 40 ಲೋಡ್ ಅಕ್ಕಿ ಕಾಣೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು. ಒಂದೊಮ್ಮೆ ದುರುಪಯೋಗ ಆಗಿರುವುದು ಕಂಡು ಬಂದಿದ್ದರೆ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳ ಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ.
ಶಾಸಕರ ದೂರಿನ ಬೆನ್ನಲ್ಲೇ ಮಂಗಳೂರಿನ ಸಹಾಯಕ ಆಯುಕ್ತರು ಬಿ.ಸಿ. ರೋಡ್ ನ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ‘ಪೂರೈಕೆಯಾದ ಅಕ್ಕಿ ಬಗ್ಗೆ ಲೆಕ್ಕಾಚಾರ ಮತ್ತು ಇತರ ವಿಷಯಗಳ ಸ್ಪಷ್ಟವಾದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ತನಿಖೆಯ ಹಿತ ದೃಷ್ಟಿಯಿಂದ ಈಗ ಮಾಹಿತಿ ನೀಡಲು ಸಾಧ್ಯವಿಲ್ಲ. ತನಿಖೆ ಮುಗಿದ ಬಳಿಕ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದ್ದಾರೆ.