ಮಂಗಳೂರು: ಆಸ್ಪತ್ರೆಯಲ್ಲೇ ವಿಕಲಚೇತನ ಬಾಲಕಿಗೆ ಲೈಂಗಿಕ ದೌರ್ಜನ್ಯ – ಅಬ್ದುಲ್ ಹಲೀಂ ಮತ್ತು ಶಮೀನಾ ಬಂಧನ

ಮಂಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಕಲಚೇತನ ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸುತ್ತಿದ್ದ ಮುಂಬೈ ಮೂಲದ ವ್ಯಕ್ತಿ ಹಾಗೂ ಸಂತ್ರಸ್ತ ಬಾಲಕಿಯ ಮೇಲಿನ ಹಲ್ಲೆಗೆ ಸಹಕರಿಸಿದ ಮಹಿಳೆಯನ್ನು ಮಹಿಳಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಲಯ ಇಬ್ಬರಿಗೂ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿಗಳನ್ನು ಮುಂಬೈನಲ್ಲಿ ನೆಲೆಸಿರುವ ಬಿಹಾರ ಮೂಲದ ಅಬ್ದುಲ್ ಹಲೀಂ (37) ಮತ್ತು ಕುಲಶೇಖರ ನಿವಾಸಿ ಶಮೀನಾ ಬಾನು (22) ಎಂದು ಗುರುತಿಸಲಾಗಿದೆ.

ದೂರುದಾರ ಮಹಿಳೆಯ ಕಿರಿಯ ಸಹೋದರ ಮನ್ಸೂರ್ ಅಹಮದ್ ಬಾಬಾ ಶೇಖಾ ಮತ್ತು ಆರೋಪಿ ಅಬ್ದುಲ್ ಹಲೀಂ ಸ್ನೇಹಿತರು. ಆಗಸ್ಟ್ 10 ರಂದು ಕಾಸರಗೋಡಿನಿಂದ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ಅವರ ಬೈಕ್ ಅಪಘಾತಕ್ಕೀಡಾಗಿದ್ದು, ಹೊಸಂಗಡಿಯಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರೂ ಆಸ್ಪತ್ರೆಯ ಒಂದೇ ಕೋಣೆಯಲ್ಲಿದ್ದರು, ಅವರ ನಡುವೆ ಪರದೆ ಇತ್ತು.ಅಪಘಾತದ ಬಗ್ಗೆ ವಿಚಾರಿಸಲು ದೂರುದಾರ ಮಹಿಳೆ ಮತ್ತು ಅವರ ಹಿರಿಯ ಮಗಳು ಮಂಜೇಶ್ವರ ಠಾಣೆಗೆ ತೆರಳಿದ್ದರು. ದೂರುದಾರ ಮಹಿಳೆ ತನ್ನ ಕಿರಿಯ ಸಹೋದರನ ಪತ್ನಿ ಶಮೀನಾ ಬಾನು ಎಂಬಾಕೆಯೊಂದಿಗೆ ವಿಕಲಚೇತನ ಕಿರಿಯ ಮಗಳನ್ನು ಬಿಟ್ಟು ಹೋಗಿದ್ದಾಳೆ. ಆರೋಪಿ ಶಮೀನಾ ಬಾನು ಆಸ್ಪತ್ರೆಯಲ್ಲಿ ಆರೋಪಿ ಅಬ್ದುಲ್ ಹಲೀಂ ಜೊತೆ ಅನೈತಿಕವಾಗಿ ವರ್ತಿಸುತ್ತಿರುವುದನ್ನು ಅಪ್ರಾಪ್ತ ಅಂಗವಿಕಲ ಬಾಲಕಿ ನೋಡಿದ್ದಾಳೆ. ನಂತರ ಶಮೀನಾ ವಿಕಲಚೇತನ ಬಾಲಕಿಯನ್ನು ಆರೋಪಿ ಅಬ್ದುಲ್ ಹಲೀಂನ ಹಾಸಿಗೆಯ ಮೇಲೆ ಕೂರಿಸಿದ್ದಳು. ಸಂತ್ರಸ್ತ ಬಾಲಕಿಯನ್ನು ಹಾಸಿಗೆಯ ಮೇಲೆ ಕೂರಿಸಿದ ಕೂಡಲೇ ಆರೋಪಿ ಅಬ್ದುಲ್ ಕಿರುಕುಳ ನೀಡಿದ್ದಾನೆ. ಬಾಲಕಿ ವಿರೋಧಿಸಿದಾಗ ಆರೋಪಿ ಶಮೀನಾ ಸಹಾಯದಿಂದ ಅಬ್ದುಲ್ ಹಲೀಂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಈ ಸಂಬಂಧ ಸಂತ್ರಸ್ತ ಬಾಲಕಿಯ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗಸ್ಟ್ 16ರಂದು ಶಮೀನಾ ಬಾನು ಅವರನ್ನು ಬಂಧಿಸಲಾಗಿತ್ತು. ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಹಲೀಂನನ್ನು ಗೋವಾ ಪೊಲೀಸರು ಮಡಗಾಂವ್‌ನಲ್ಲಿ ಬಂಧಿಸಿದ್ದಾರೆ. ಇಬ್ಬರನ್ನೂ 15 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಲೋಕೇಶ್ ಎ ಸಿ  ತನಿಖೆ ಮುಂದುವರಿಸಿದ್ದಾರೆ. ವಿಕಲಚೇತನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸಂಬಂಧಿಕರೊಂದಿಗೆ ಕಳುಹಿಸಿದಾಗ ಸಾರ್ವಜನಿಕರು ನಿಗಾ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here