ಮಂಗಳೂರು(ಬೆಂಗಳೂರು): ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಸದ್ಯಕ್ಕೆ ಅನುಮತಿ ಇಲ್ಲ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಎಪಿಎಲ್, ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅನೇಕ ಮಂದಿ ಬೇಡಿಕೆ ಇಟ್ಟಿದ್ದಾರೆ, ಆದರೆ ಸದ್ಯಕ್ಕೆ ಯಾವುದೇ ಹೊಸ ಕಾರ್ಡ್ ಗೆ ಅನುಮತಿ ಇಲ್ಲ ಎಂದು ಹೇಳಿದರು.ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು ಆರಂಭವಾಗಿಲ್ಲ. ಎಪಿಎಲ್, ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಗೆ ನಾವೇ ಓಪನ್ ಮಾಡಿಲ್ಲ. ಏನು ಕಾರಣ ಅಂತ ಸದ್ಯದಲ್ಲೇ ಹೇಳುತ್ತೇವೆ ಎಂದು ಸಚಿವರು ಹೇಳಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ನಂತರ ಆ.25, 26 ಒಳಗೆ ಫಲಾನುಭವಿಗಳ ಅಕೌಂಟ್ ಗೆ ಹಣ ಸಂದಾಯವಾಗುತ್ತದೆ. ಅಕ್ಕಿ, ರಾಗಿ, ಜೋಳವನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ ಎಂಬ ಬಗ್ಗೆ ಮಾಹಿತಿ ಪಡೆದು, ಆ ನಂತರದಲ್ಲಿ ಉಳಿಕೆ ಹಣ ಫಲಾನುಭವಿಗಳಿಗೆ ಹೋಗಲಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯಕ್ಕೆ ಅಕ್ಕಿ ಕೊರತೆ ಇರುವ ಕಾರಣ ಅಕೌಂಟ್ ಗೆ ಹಣ ಸಂದಾಯವಾಗಿದೆ. ಈಗಾಗಲೇ ಅಕ್ಕಿ ಕೊಡಲು ತೆಲಂಗಾಣ ಮತ್ತು ಆಂಧ್ರಪ್ರದೇಶ ಮುಂದೆ ಬಂದಿದೆ. ಅಕ್ಕಿ ದರದ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಹತ್ತು ದಿನಗಳ ಒಳಗೆ ಎಲ್ಲವೂ ಫೈನಲ್ ಆಗುತ್ತದೆ ಎಂದು ಸಚಿವರು ಹೇಳಿದ್ದಾರೆ.