ಮಂಗಳೂರು: ನಗರದ ಸುರತ್ಕಲ್ ತಡಂಬೈಲ್ ಪರಿಸರದ ಬೀಚ್ ರಸ್ತೆಯಲ್ಲಿ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುರತ್ಕಲ್ ಕಾಟಿಪಳ್ಳ 2ನೇ ಬ್ಲಾಕ್ ಈದ್ಗಾ ಬಳಿಯ ನಿವಾಸಿ ಶಾಕೀಬ್ ಯಾನೆ ಶಬ್ಬು (33), ಸುರತ್ಕಲ್ ಚೊಕ್ಕಬೆಟ್ಟು 8ನೇ ಬ್ಲಾಕ್ ನಿವಾಸಿ ನಿಸಾರ್ ಹುಸೈನ್ ಯಾನೆ ನಿಚ್ಚು (34) ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 2.60 ಲಕ್ಷ ರೂ. ಮೌಲ್ಯದ ಒಟ್ಟು 52 ಗ್ರಾಂ ಎಂಡಿಎಂಎ ಮಾದಕ ವಸ್ತು, ವೋಕ್ಸ್ ವ್ಯಾಗನ್ ಕಾರು, ಎರಡು ಮೊಬೈಲ್ ಫೋನುಗಳು, 1,800 ರೂ. ನಗದು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 7,83,300 ರೂ. ಎಂದು ಅಂದಾಜಿಸಲಾಗಿದೆ. ಬಂಧಿತರು ಸುರತ್ಕಲ್ ತಡಂಬೈಲ್ ಪರಿಸರದ ಬೀಚ್ ರಸ್ತೆಯಲ್ಲಿ ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ಅವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಎಂಡಿಎಂಎ ಮಾದಕ ವಸ್ತು ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಶಾಕೀಬ್ ಯಾನೆ ಶಬ್ಬು ಈ ಹಿಂದೆ ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೂರು ಕಳವು ಪ್ರಕರಣಗಳು, ಕೊಲೆಯತ್ನ ಪ್ರಕರಣ, ಹಲ್ಲೆ ಪ್ರಕರಣ, ಬಜ್ಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ, ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮೂಡಬಿದ್ರಿ ಠಾಣೆಯಲ್ಲಿ ಸರಕಳ್ಳತನ ಪ್ರಕರಣ, ಉಡುಪಿ ಜಿಲ್ಲೆಯ ಕಾರ್ಕಳ ನಗರ ಠಾಣೆ, ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವಾ ಠಾಣೆಗಳಲ್ಲಿ ಸರಕಳ್ಳತನ ಪ್ರಕರಣ, ಮಣಿಪಾಲದಲ್ಲಿ ದರೋಡೆ ಪ್ರಕರಣಗಳು ಸೇರಿ ಒಟ್ಟು 13 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದಾನೆ. ಈತ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ನಂತರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು.
ಇನ್ನೋರ್ವ ಆರೋಪಿ ನಿಸಾರ್ ಹುಸೈನ್ ಯಾನೆ ನಿಚ್ಚು ಈ ಹಿಂದೆ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಕೊಲೆ ಯತ್ನ ಪ್ರಕರಣ, ಬರ್ಕೆ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಹಾಗೂ ಕೊಲೆ ಯತ್ನ ಪ್ರಕರಣ, ಮುಲ್ಕಿ ಠಾಣೆಯಲ್ಲಿ ಕಳವು ಪ್ರಕರಣ, ಮಂಗಳೂರು ಪೂರ್ವ ಠಾಣೆ, ಉಪ್ಪಿನಂಗಡಿ, ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ನಡೆಸಿದ 3 ಪ್ರಕರಣಗಳು, ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ 7 ವಾರಂಟ್ ಗಳು ಜ್ಯಾರಿಯಲ್ಲಿದೆ. ಅಲ್ಲದೇ, ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯಾಟದ ವೇಳೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಕೂಡಾ ಭಾಗಿಯಾಗಿದ್ದು, ಈ ಪ್ರಕರಣದಲ್ಲಿ ಕೂಡಾ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ಬಂಧಿಸುವ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಂ., ಪಿಎಸ್ಐಗಳಾದ ರಾಜೇಂದ್ರ ಬಿ., ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ., ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.