ಮಂಗಳೂರು(ಶಿಲ್ಲಾಂಗ್): ಆ.27 ರಂದು ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 1,700ಕ್ಕೂ ಅಧಿಕ ಗುಹೆಗಳನ್ನು ಕಂಡುಹಿಡಿದ ಮೇಘಾಲಯದ ನಿವಾಸಿ ಬ್ರಿಯಾನ್ ಡಿ ಖರ್ಪ್ರಾನ್ ಮತ್ತು ಅವರ ತಂಡವನ್ನು ಶ್ಲಾಘಿಸಿದ್ದಾರೆ.
‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 1964ರಲ್ಲಿ ಬ್ರಿಯಾನ್ ಶಾಲೆಗೆ ಹೋಗುವ ಹುಡುಗನಾಗಿ ತಮ್ಮ ಅನ್ವೇಷಣೆಯನ್ನು ಪ್ರಾರಂಭಿಸಿದರು. 1990ರಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಒಂದು ಸಂಘವನ್ನು ಸ್ಥಾಪಿಸಿ ಮೇಘಾಲಯದಲ್ಲಿರುವ ಅಜ್ಞಾತ ಗುಹೆಗಳ ಬಗ್ಗೆ ಹುಡುಕಲು ಪ್ರಾರಂಭಿಸಿದರು. ಬ್ರಿಯಾನ್ ತಮ್ಮ ತಂಡದೊಂದಿಗೆ ಮೇಘಾಲಯದಲ್ಲಿ 1,700ಕ್ಕೂ ಹೆಚ್ಚು ಗುಹೆಗಳನ್ನು ಕಂಡುಹಿಡಿದರು ಮತ್ತು ರಾಜ್ಯವನ್ನು ವಿಶ್ವ ಗುಹೆ ನಕ್ಷೆಯಲ್ಲಿ ಸೇರಿಸಿದರು. ಭಾರತದ ಕೆಲವು ಉದ್ದವಾದ ಮತ್ತು ಆಳವಾದ ಗುಹೆಗಳು ಮೇಘಾಲಯದಲ್ಲಿವೆ ಎಂದರು. ಈ ಗುಹೆಗಳ ಪೈಕಿ ಕೆಲವು ದೇಶದ ಅತ್ಯಂತ ಉದ್ದವಾದ ಮತ್ತು ಆಳವಾದ ಗುಹೆಗಳಾಗಿವೆ. ಮೇಘಾಲಯ ಅಡ್ವೆಂಚರರ್ಸ್ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿರುವ ಬ್ರಿಯಾನ್ ಡಿ ಖರ್ಪ್ರಾನ್ ಅವರು ಇದುವರೆಗೆ ರಾಜ್ಯದಲ್ಲಿ 537.6 ಕಿಲೋ ಮೀಟರ್ ಗುಹೆಗಳನ್ನು ನಕ್ಷೆ ಮಾಡಿದ್ದಾರೆ. ಮೇಘಾಲಯದ ಗುಹೆಗಳಿಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.