ಮಂಗಳೂರು(ಬೆಂಗಳೂರು): ಚಂದ್ರಯಾನ 3ರ ರೋವರ್ ಮತ್ತು ಲ್ಯಾಂಡರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಚಂದ್ರನಲ್ಲಿ ರಾತ್ರಿ ಆವರಿಸುತ್ತಿದ್ದು ಇಸ್ರೋ ತನ್ನ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್’ಗಳನ್ನು ಸ್ಲೀಪಿಂಗ್ ಮೋಡ್ ನಲ್ಲಿರಿಸಲು ಸಿದ್ಧತೆ ನಡೆಸಿದೆ.
ಚಂದ್ರನಲ್ಲಿ ಒಂದು ರಾತ್ರಿ ಭೂಮಿಯ 14 ದಿನಗಳಿಗೆ ಸಮ. ಈ 14 ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ನಿರಂತರವಾಗಿ ಕಾರ್ಯ ನಿರ್ವಹಿಸಿತ್ತು. ಇದೀಗ ಚಂದ್ರನಲ್ಲಿ ರಾತ್ರಿ ಆವರಿಸುತ್ತಿದ್ದು ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವುದಿಲ್ಲ. ಕಾರ್ಗತ್ತಲ್ಲಿನಲ್ಲಿ ಕೆಲಸ ಮಾಡುವುದು ಅಸಾಧ್ಯವಾದ ಹಿನ್ನೆಲೆಯಲ್ಲಿ ಇಸ್ರೋ ರೋವರ್ ಮತ್ತು ಲ್ಯಾಂಡರ್’ಗಳನ್ನು ನಿದ್ರಾವಸ್ಥೆಯಲ್ಲಿರಿಸಲು ಮುಂದಾಗಿದೆ. ಈ ಬಗ್ಗೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಸೆ.2ರಂದು ಮಾಹಿತಿ ನೀಡಿದ್ದು, ಚಂದ್ರನ ಮೇಲಿನ ರಾತ್ರಿಯನ್ನು ತಡೆದುಕೊಳ್ಳಲು ಅವುಗಳನ್ನು ಶೀಘ್ರದಲ್ಲೇ ನಿದ್ರಾವಸ್ಥೆಗೆ ತರಲಾಗುವುದು ಎಂದು ಹೇಳಿದ್ದಾರೆ. ಲ್ಯಾಂಡರ್ ಮತ್ತು ರೋವರ್, ಕ್ರಮವಾಗಿ ‘ವಿಕ್ರಮ್’ ಮತ್ತು ‘ಪ್ರಜ್ಞಾನ್’ ಇನ್ನೂ ಕಾರ್ಯನಿರ್ವಹಿಸುತ್ತಿವೆ ಮತ್ತು ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ನಮ್ಮ ತಂಡವು ಈಗ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. 14 ದಿನಗಳ ರಾತ್ರಿ ಕಳೆದ ಬಳಿಕ ಮತ್ತೆ 15ನೇ ದಿನ ಚಂದ್ರನಲ್ಲಿ ಬೆಳಕಾಗುತ್ತದೆ. ಆಗ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗೆ ಸೂರ್ಯ ಬಿಸಿಲು ತಾಗಿ ಅವುಗಳಲ್ಲಿನ ಸೋಲಾರ್ ಫಲಕಗಳು ಚಾಲ್ತಿಗೊಳ್ಳಬಹುದು. ಒಂದು ವೇಳೆ ಸೋಲಾರ್ ಫಲಕಗಳು ಚಾಲ್ತಿಗೊಂಡು ಇಂಧನ ಭರ್ತಿಯಾದರೆ ಮತ್ತೆ ಎಂದಿನಂತೆ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ.