ಮಧ್ಯಪ್ರದೇಶದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಆರು ಮಂದಿ ನಾಯಕರು

ಮಂಗಳೂರು(ಭೋಪಾಲ್): ಮಧ್ಯಪ್ರದೇಶದ ಓರ್ವ ಹಾಲಿ ಬಿಜೆಪಿ ಶಾಸಕ ಸೇರಿದಂತೆ ವಿವಿಧ ಪಕ್ಷಗಳ ಒಟ್ಟು ಒಂಬತ್ತು ಮಂದಿ ನಾಯಕರು ಸೆ.2ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರೆಲ್ಲ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತಿತರರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಾಳಯಕ್ಕೆ ಸೇರಿಕೊಂಡರು ಎಂದು ನ್ಯೂ ಇಂಡಿಯಾನ್‌ ಎಕ್ಸ್ಪ್ರೆಸ್‌ ಡಾಟ್‌ಕಾಮ್ ವರದಿ ಮಾಡಿದೆ.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಒಂಬತ್ತು ನಾಯಕರ ಪೈಕಿ ಮೂವರು ನಾಯಕರು ಮೂಲ ಬಿಜೆಪಿಗೆ ಸೇರಿದ್ದಾರೆ. ಈ ಪೈಕಿ ಇಂದೋರ್ ನಿಂದ ಐದು ಬಾರಿ, ಬದ್ನಾವರ್ ನಿಂದ 1993 ಹಾಗೂ 2013ರಲ್ಲಿ ಗೆಲುವು ಸಾಧಿಸಿದ್ದ ಭನ್ವರ್ ಸಿಂಗ್ ಶೆಖಾವತ್ ಕೂಡಾ ಸೇರಿದ್ದಾರೆ. ಉಳಿದಂತೆ, ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಉಮಾಶಂಕರ್ ಗುಪ್ತಾರ ಸೋದರಳಿಯ ಹಾಗೂ ಭೋಪಾಲ್ ನ ಬಿಜೆಪಿ ನಾಯಕ ಆಶಿಶ್ ಅಗರ್ವಾಲ್ ಕಾಂಗ್ರೆಸ್ ಪಕ್ಷದತ್ತ ಹೆಜ್ಜೆ ಹಾಕಿದ್ದಾರೆ. ಇವರೊಂದಿಗೆ ಕತ್ನಿ ಜಿಲ್ಲೆಯ ತಂದೆ-ಮಗ ಚೆದಿಲಾಲ್ ಪಾಂಡೆ ಹಾಗೂ ಶಿವ್ ರಾಮ್ ಪಾಂಡೆ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಗುರುವಾರ ಕೊಲಾರಸ್ (ಶಿವ್ ಪುರಿ) ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ವಿರೇಂದ್ರ ರಘುವಂಶಿ ಬಿಜೆಪಿಯನ್ನು ತೊರೆದಿದ್ದರು. 2020ರಲ್ಲಿ ಕಾಂಗ್ರೆಸ್ ತೊರೆದು, ಜ್ಯೋತಿರಾದಿತ್ಯ ಸಿಂಧ್ಯಾರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದ ಗ್ವಾಲಿಯರ್-ಚಂಬಲ್ ‍ಪ್ರಾಂತ್ಯದ ನಾಯಕರಾದ ಮಾಜಿ ಕಾಂಗ್ರೆಸ್ ಶಾಸಕ ದೇವೇಂದ್ರ ಸಿಂಗ್ ರಘುವಂಶಿಯವರ ಪುತ್ರಿ ಅನ್ಶು ರಘುವಂಶಿ ಹಾಗೂ ಅರವಿಂದ್ ಧಾಕಡ್ ಮತ್ತೆ ಮಾತೃಪಕ್ಷಕ್ಕೆ ಮರಳಿದ್ದಾರೆ. ಝಾನ್ಸಿ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಸುಜನ್ ಸಿಂಗ್ ಬುಂದೇಲಾರ ಪುತ್ರ ಚಂದ್ರಭೂಷಣ್ ಸಿಂಗ್ ಬುಂದೇಲಾ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖ ನಾಯಕರಾಗಿದ್ದಾರೆ.

LEAVE A REPLY

Please enter your comment!
Please enter your name here