ಮಂಗಳೂರು(ಬೆಂಗಳೂರು): ಕೊಬ್ಬರಿ ಬೆಳೆಗೆ ವರ್ಷ ಪೂರ್ತಿ ಬೆಂಬಲ ಬೆಲೆ ನೀಡಿ ಖರೀದಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಗೆ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ. ಮುಂಬರುವ ಜನವರಿಯಿಂದ ಬೆಂಬಲ ಬೆಲೆಯೊಂದಿಗೆ ಭತ್ತ, ರಾಗಿ, ಜೋಳ ಖರೀದಿಸಲು ಸೂಚಿಸಿದೆ.
ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕಳೆದ ಆ.31ರಂದು ನಡೆದಿದ್ದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಹಲವು ಬೆಳೆಗಳ ಬೆಲೆ ಸ್ಥಿರೀಕರಣ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಮುಂಬರುವ ಜನವರಿಯಿಂದ ಬೆಂಬಲ ಬೆಲೆಯೊಂದಿಗೆ ಭತ್ತ, ರಾಗಿ, ಜೋಳ ಖರೀದಿಸಬೇಕು. ಈ ಹಿಂದೆ ಆದಂತೆ ಯಾವುದೇ ಲೋಪಗಳಾಗದೆ ರೈತರಿಗೆ ಅನುಕೂಲ ಮಾಡಿ,ನಿಯಮಾನುಸಾರ ಖರೀದಿಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿ ಸೂಚಿಸಿದೆ.
ಈರುಳ್ಳಿ ರಫ್ತಿನ ಮೇಲೆ ಅಧಿಕ ತೆರಿಗೆ ವಿಧಿಸಿರುವುದರಿಂದ ರೈತರಿಗೆ ಉತ್ತಮ ದರ ಪಡೆಯುವ ಅವಕಾಶ ತಪ್ಪಿದೆ ಈ ಬಗ್ಗೆ ಕೇಂದ್ರ ಕ್ರಮ ವಹಿಸಬೇಕು ಎಂದು ಒತ್ತಾಯಿಸಲು ಸಮಿತಿ ನಿರ್ಣಯಿಸಿತು. ಆವರ್ತ ನಿಧಿ ಬಳಸಿ ಬೇರೆ ಬೇರೆ ಇಲಾಖೆಗಳು ಖರೀದಿ ಮಾಡಿದ್ದು ಅದನ್ನು ಆದಷ್ಟು ಬೇಗ ಮರುಪಾವತಿ ಮಾಡಬೇಕು. ಇನ್ನು ಮುಂದೆ ಆವರ್ತ ನಿಧಿ ಬಳಸಿದರೆ ಅದಕ್ಕೆ ಸೂಕ್ತ ಬಡ್ಡಿ ಪಾವತಿ ಮಾಡಿ ಹಿಂದಿರುಗಿಸಬೇಕು ಎಂದು ಸಂಬಂದ ಪಟ್ಟ ಏಜೆನ್ಸಿಗಳು, ಇಲಾಖೆಗಳಿಗೆ ಸೂಚನೆ ನೀಡಲು ಉಪ ಸಮಿತಿ ತೀರ್ಮಾನಿಸಿತು. ಪಡಿತರ ಅಹಾರ ಸಾಮಗ್ರಿ ಖರೀದಿ ಪ್ರಕ್ರಿಯೆಯಲ್ಲಿ ಕೇಂದ್ರದ ಸಂಸ್ಥೆಗಳ ಜೊತೆಗೆ ರಾಜ್ಯದ ಸಂಸ್ಥೆಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಸಮಿತಿ ಸಲಹೆ ನೀಡಿತು.