ಮಂಗಳೂರು(ಬೆಂಗಳೂರು): ಮಳೆ ಕೊರತೆಯ ಕಾರಣದಿಂದ ಭತ್ತದ ಇಳುವರಿ ಕುಸಿದಿರುವುದರ ನಡುವೆ ಭತ್ತಕ್ಕೆ ಮುಂದೆ ಇನ್ನೂ ಹೆಚ್ಚು ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಭತ್ತದ ದಾಸ್ತಾನು ಹೆಚ್ಚಾಗಿದೆ. ಇದರ ಪರಿಣಾಮವಾಗಿ ರಾಜ್ಯದ ಬಹುತೇಕ ಚಿಲ್ಲರೆ ಮಾರುಕಟ್ಟೆಗಳಲ್ಲಿ ಅಕ್ಕಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಅಕ್ಕಿಯ ಬೆಲೆಯು ಕೆಲವು ಮಾರುಕಟ್ಟೆಗಳಲ್ಲಿ ಕೆ.ಜಿ.ಗೆ 20 ರೂ.ರವರೆಗೆ ಹೆಚ್ಚಾಗಿದೆ. ಊಟಕ್ಕೆ ಹೆಚ್ಚಾಗಿ ಬಳಕೆಯಾಗುವ ಸೋನಾ ಮಸೂರಿ ಅಕ್ಕಿಯ ಬೆಲೆಯು ಕೋಲಾರ, ತುಮಕೂರಿನಲ್ಲಿ ಒಂದು ತಿಂಗಳಲ್ಲಿ ಕೆ.ಜಿ.ಗೆ 15ರೂ.ನಷ್ಟು ಜಿಗಿದಿದೆ. ದ.ಕ ದಲ್ಲಿ ಹೆಚ್ಚಾಗಿ ಬಳಸುವ ಕುಚಲಕ್ಕಿ ಬೆಲೆಯು 5 ರಿಂದ 6 ರೂ.ರಷ್ಟು ಹೆಚ್ಚಳವಾಗಿದೆ. ಆನಂದ್ ಸೇರಿದಂತೆ ಹಲವು ಬ್ರ್ಯಾಂಡ್ ನ ಅಕ್ಕಿ ಬೆಲೆಯಲ್ಲಿ ಕ್ವಿಂಟಾಲ್ ಗೆ 500 ರಿಂದ 600 ರೂ. ಏರಿಕೆ ಕಂಡಿದೆ. ಬೇಡಿಕೆಗೆ ತಕ್ಕಷ್ಟು ಅಕ್ಕಿ ಪೂರೈಕೆ ಆಗುತ್ತಿಲ್ಲ, ಪೂರೈಕೆದಾರರು ಬೆಲೆ ಹೆಚ್ಚಿಸಿರುವುದರಿಂದ ಗ್ರಾಹಕರಿಂದ ಹೆಚ್ಚಿನ ದರ ಪಡೆಯುವುದು ಅನಿವಾರ್ಯವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಮಲೆನಾಡಿನ ಕೆಲವೆಡೆ ಅಕ್ಕಿಯ ದರ ಗಗನಕ್ಕೇರಿದೆ. ಭತ್ತದ ಪೂರೈಕೆ ಇಲ್ಲದೇ ಇಲ್ಲಿನ ರೈಸ್ ಮಿಲ್‌ಗಳ ಕೆಲಸದ ದಿನಗಳು ಕಡಿತಗೊಂಡಿವೆ. ಕಳೆದ ಎರಡು ತಿಂಗಳಲ್ಲಿ ಸಾಗರದಲ್ಲಿ ಅಭಿಲಾಷಾ ಹಾಗೂ ಪದ್ಮರೇಖಾ ಅಕ್ಕಿಯ ದರ ಕೆ.ಜಿ.ಗೆ 26 ರೂ. ಇದ್ದದ್ದು 46ಕ್ಕೆ ರೂ. ಏರಿಕೆಯಾಗಿದೆ. ಕಳೆದ ಎಂಟು ತಿಂಗಳ ಅವಧಿಯಲ್ಲಿ ಉತ್ತಮ ಗುಣಮಟ್ಟದ ಸೋನಾ ಮಸೂರಿ ಅಕ್ಕಿಯ ದರ ಶೇ. 25ರಷ್ಟು ಹೆಚ್ಚಳ ಕಂಡಿದೆ ಎಂದು ಕಲಬುರಗಿ ಜಿಲ್ಲಾ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ಮಾದಮಶೆಟ್ಟಿ ಹೇಳುತ್ತಾರೆ.
ಮಂಡ್ಯ ಜಿಲ್ಲೆಯ ರೈತರು ಹೆಚ್ಚಾಗಿ ಬೆಳೆಯುವ ಜಯ ಅಕ್ಕಿ, ಐಆರ್–64, 1001 ಅಕ್ಕಿ ರೀಟೆಲ್ ದರ ಏರಿಕೆಯಾಗಿದೆ. ಎರಡು ತಿಂಗಳ ಹಿಂದೆ 22–25ರೂ.ನಷ್ಟು ಇದ್ದ ಕೆ.ಜಿ. ಜಯ ಅಕ್ಕಿ ಬೆಲೆ ಈಗ 38–40 ರೂ.ಗೆ ತಲುಪಿದೆ. 30-32 ರೂ. ಇದ್ದ ಐಆರ್–64 ಅಕ್ಕಿ ಈಗ 45 ರೂ.ನವರೆಗೂ ಏರಿಕೆ ಕಂಡಿದೆ. 23 ರೂ.ವರೆಗೆ ಮಾರಾಟವಾಗುತ್ತಿದ್ದ 1001 ಅಕ್ಕಿ ಬೆಲೆ ಈಗ 35 ರೂ. ಗೆ ಏರಿಕೆಯಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆಯಲ್ಲಿ ಏರಿಕೆಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂಬುವುದು ಬಲ್ಲವರ ಮಾತು.