ಮಂಗಳೂರು :ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹುಬ್ಬಳಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ವಾಮೀಜಿ, ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಲಿದ್ದು, ಯುಗಾದಿ ನಂತರ ಏನಾಗುತ್ತೋ ಕಾದು ನೋಡಿ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಸ್ವಾಮೀಜಿ, ಅದು ಅವರವರ ವಿಚಾರ. ಅದರ ಬಗ್ಗೆ ಹೇಳಲು ಆಗುವುದಿಲ್ಲ ಎಂದು ನುಡಿದಿದ್ದಾರೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಆರೋಪವನ್ನು ನಿರಾಕರಿಸಿದ ಅವರು, ಆ ರೀತಿ ಆಗಲ್ಲ. ರಾಜ್ಯ ಸಂಪತ್ಬರಿತವಾಗಿರಲಿದೆ. ಜನ ಸಾಮಾನ್ಯರಿಗೆ ಅನುಕೂಲವಾಗಿದೆ ಎಂದಿದ್ದಾರೆ.
ಬರಗಾಲದ ಛಾಯೆ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ, ಮನುಷ್ಯ ಮಾಡಿದ ತಪ್ಪುಗಳನ್ನು ದೇವರು ಕ್ಷಮಿಸುತ್ತಾನೆ. ಆದರೆ ಮನುಷ್ಯ ಮಾಡಿದ ಪಾಪಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ. ಮನುಷ್ಯನ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ. ಕರ್ಮ ಬಾಧೆಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿಯನ್ನು ಸಾಮೂಹಿಕವಾಗಿ ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶ್ರಾವಣ ಮಾಸದ ಮಧ್ಯ ಭಾಗದಲ್ಲಿ ಮಳೆಯಾಗಿದೆ. ಅಮಾವಾಸ್ಯೆ ಕಳೆದ ನಂತರ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.