ಮಂಗಳೂರು(ಕೇರಳ): ನಿಫಾ ವೈರಸ್ನಿಂದ ಬುಧವಾರ ಇಬ್ಬರು ಸಾವನ್ನಪ್ಪಿದ ಕೇರಳದ ಕೋಝಿಕೋಡ್ನಲ್ಲಿ ಏಳು ಗ್ರಾಮ ಪಂಚಾಯಿತಿಗಳನ್ನು ಕಂಟೈನ್ಮೆಂಟ್ ವಲಯಗಳಾಗಿ ಘೋಷಿಸಲಾಗಿದ್ದು ಜೊತೆಗೆ ಸೋಂಕು ಹರಡುವುದನ್ನು ತಡೆಯಲು ಕ್ರಮಗಳನ್ನು ಬಲಪಡಿಸಲಾಗಿದೆ ಎಂದು ಕೇರಳ ಸರ್ಕಾರ ಬುಧವಾರ ಹೇಳಿದೆ.
ಕೋಝಿಕ್ಕೋಡ್ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕ ಸೇರಿದಂತೆ ನಾಲ್ವರಲ್ಲಿ ನಾಲ್ಕು ನಿಫಾ ಪ್ರಕರಣಗಳು ದೃಢಪಟ್ಟ ನಂತರ ರಾಜ್ಯ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಪೀಡಿತ ಪ್ರದೇಶಗಳಲ್ಲಿ ಕೆಲವು ಶಾಲೆಗಳು ಮತ್ತು ಕಚೇರಿಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಸೋಂಕಿತ ಬಾವಲಿಗಳು, ಹಂದಿಗಳು ಅಥವಾ ಇತರ ಜನರ ದೈಹಿಕ ದ್ರವಗಳ ನೇರ ಸಂಪರ್ಕದ ಮೂಲಕ ಮನುಷ್ಯರಿಗೆ ಹರಡುವ ನಿಫಾ ವೈರಸ್ಗಾಗಿ ಇದುವರೆಗೆ 130 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ ಎಂದು ಕೇರಳದ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ನಿಫಾ ಎಚ್ಚರಿಕೆಯ ನಡುವೆ, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್ಐವಿ) ತಂಡಗಳು ಕೇರಳಕ್ಕೆ ಆಗಮಿಸಲಿದ್ದು, ನಿಪಾ ಪರೀಕ್ಷೆ ಮತ್ತು ಬಾವಲಿಗಳ ಸಮೀಕ್ಷೆಯನ್ನು ನಡೆಸಲು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮೊಬೈಲ್ ಲ್ಯಾಬ್ ಅನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಕೇರಳದಲ್ಲಿ ನಿಫಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುದರ್ಶನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಫಾ ಹಿನ್ನಲೆಯಲ್ಲಿ ಜಿಲ್ಲೆಯ ಗಡಿ ಪ್ರದೇಶದಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಜಿಲ್ಲೆಯಲ್ಲಿ ಜ್ವರ ಸಮೀಕ್ಷೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ವೆನ್ಲಾಕ್ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಿಫಾ ಐಸೋಲೇಶನ್ ವಾರ್ಡ್ ಮೀಸಲಿಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ನವೀನ್ ಚಂದ್ರ ಕುಲಾಲ್ ಉಪಸ್ಥಿತರಿದ್ದರು.