ಮಂಗಳೂರು(ಬೆಂಗಳೂರು): ರಾಜ್ಯದಲ್ಲಿ ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸೆ.17ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಇರಬೇಕಾಗುತ್ತದೆ. ಕರಕುಶಲಕರ್ಮಿಗಳಿಗೆ ಇಲಾಖೆ ರಚಿಸಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು. ನೇಕಾರರಿಗೆ ಇರುವ ಸೌಲಭ್ಯಗಳ ಮಾದರಿಯಲ್ಲಿ ಸೌಲಭ್ಯಗಳು ಹಾಗೂ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಇದ್ದು ಅನುದಾನ ಹೆಚ್ಚು ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನೇಕ ಹಿಂದುಳಿದ ಜಾತಿಗಳ ಜಯಂತಿ ಹಾಗೂ ನಿಗಮಗಳನ್ನೂ ರಚನೆ ಮಾಡಲು ತೀರ್ಮಾನ ಮಾಡಿ ಹಣವನ್ನೂ ಒದಗಿಸಿದ್ದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬದೇ ಹೋದರೆ ಅವು ಮುಖ್ಯ ವಾಹಿನಿಗೆ ಬರುವುದು ಕಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಆಯಾ ಜಾತಿಯವರೇ ತಮ್ಮ ಜಯಂತಿಗಳನ್ನು ಆಚರಣೆ ಮಾಡಿದರೆ ಜಾತಿ ಬಣ್ಣ ಬರುತ್ತದೆ. ಸರಕಾರ ಮಾಡಿದರೆ ಜಾತಿ ಬಣ್ಣ ಬರುವುದಿಲ್ಲ. ನಾವು ಸರ್ವರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡುವುದರಲ್ಲಿ ನಂಬಿಕೆವುಳ್ಳವರು. ಕೆಲವೇ ಜಾತಿಗಳ ಸಮಾಜ ನಿರ್ಮಾಣವಾಗಬಾರದು. ನಮ್ಮಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಅನಾದಿ ಕಾಲದಿಂದಲೂ ನೈಪುಣ್ಯತೆ, ಕೌಶಲ್ಯವಿದ್ದರೂ ಆರ್ಥಿಕವಾಗಿ ಸಬಲರಲ್ಲ. ಸಬಲರಾಗಲು ಆರ್ಥಿಕ, ಸಾಮಾಜಿಕ ರಾಜಕೀಯ ಅವಕಾಶಗಳು ಸಿಗಬೇಕು. ಇಲ್ಲದಿದ್ದರೆ ಯಾವ ಜಾತಿಯೂ ಮೇಲೆ ಬರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಸಂವಿಧಾನದ ವಿರುದ್ಧ ಇರುವವರ ಬಳಿ ಅಧಿಕಾರ ಇದ್ದರೆ ಸಾಧ್ಯವಿಲ್ಲ. ಬಹುತ್ವದ ಸಮಾಜ ಉಳ್ಳ ನಾವು ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡಬೇಕು. ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು. ಒಂದು ಧರ್ಮ ಆಧಾರಿತ ದೇಶವಲ್ಲ ಇದು. ಒಂದು ಜಾತಿ, ಭಾಷೆ ಆಧಾರಿತ ದೇಶವಲ್ಲ. ಸಹಿಷ್ಣುತೆ, ಸಹಬಾಳ್ವೆ ಎಂದು ಸಂವಿಧಾನ ಹೇಳುತ್ತದೆ ಎಂದು ಅವರು ಹೇಳಿದರು.