ಗುಜರಾತ್‌ನಲ್ಲಿ ಭಾರಿ ಮಳೆ – 11,900 ಮಂದಿ ಸ್ಥಳಾಂತರ – ಅಪಾಯಮಟ್ಟ ಮೀರಿ ಹರಿಯುತ್ತಿರುವ ನರ್ಮದಾ ನದಿ

ಮಂಗಳೂರು(ಬರೂಚ್‌): ಸೆ.17ರಿಂದ ಗುಜರಾತ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ವಡೋದರ, ಬರೂಚ್, ನರ್ಮದಾ, ದಹೊಡ್, ಪಂಚಮಹಲ್, ಆನಂದ್‌ ಹಾಗೂ ಗಾಂಧಿನಗರ ಜಿಲ್ಲೆಯ ತಗ್ಗು ಪ್ರದೇಶದ 11,900 ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು 270 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ರಸ್ತೆಗೆ ಮರಗಳು ಉರುಳಿ ಬಿದ್ದಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಸರ್ದಾರ್‌ ಸರೋವರ ಅಣೆಕಟ್ಟಿನಿಂದ ನೀರು ಹೊರಬಿಡಲಾಗಿದ್ದು, ಪರಿಣಾಮ ನರ್ಮದಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ದಂಡೆಯಲ್ಲಿ ವಾಸಿಸುವ ಸುಮಾರು 6,000 ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ನರ್ಮದಾ ನದಿಯ ನೀರಿನ ಪ್ರಮಾಣ 37.72 ಅಡಿ ಇದ್ದು, ಇದು ಅಪಾಯ ಮಟ್ಟಕ್ಕಿಂತ 9.72 ಅಡಿಯಷ್ಟು ಹೆಚ್ಚು. ಸರ್ದಾರ್‌ ಸರೋವರ ಅಣೆಕಟ್ಟಿನಿಂದ ಭಾನುವಾರ ಹೆಚ್ಚಿನ ಪ್ರಮಾಣದ ನೀರು ಹೊರಬಿಟ್ಟ ಕಾರಣ ಈ ಮಟ್ಟ 40 ಅಡಿಗೆ ತಲುಪಿತ್ತು. ಬರೂಚ್ ನಗರ, ತೆಹ್ಸಿಲ್ ಸೇರಿ ಹಲವು ಪ್ರದೇಶಗಳು ಹಾಗೂ ಅಂಕ್ಲೇಶ್ವರದ ಗ್ರಾಮೀಣ ಭಾಗಗಳಲ್ಲಿ ಮಂಡಿವರೆಗೆ ನೀರು ತುಂಬಿದ್ದು, ಸೋಮವಾರ ಬೆಳಿಗ್ಗೆಯಿಂದ ನೀರು ನಿಧಾನವಾಗಿ ಇಳಿಯುತ್ತಿದೆ. ಮಳೆ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಭೂಪೇಂದ್ರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಅಗತ್ಯ ಇರುವಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಸಲು, ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ನ ತಲಾ 10 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ವಡೋದರ ಜಿಲ್ಲೆಯ ಕಾರ್ಜನ್‌ ತಾಲೂಕಿನಲ್ಲಿರುವ ನರ್ಮದಾ ನದಿಯ ಸಣ್ಣ ದ್ವೀಪದಲ್ಲಿ ಸಿಲುಕಿದ್ದ 12 ಮಂದಿಯನ್ನು 48 ಗಂಟೆಗಳ ಕಾರ್ಯಾಚರಣೆ ನಡೆಸಿ ಸೇನಾ ಪಡೆಗಳು ರಕ್ಷಣೆ ಮಾಡಿವೆ. ಇದರಲ್ಲಿ ಮಹಿಳೆಯರು ಹಾಗೂ ಮಕ್ಕಳು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಾವಳಿ, ಮಹಿಸಾಗರ, ಪಂಚಮಹಲ್ ಹಾಗೂ ಸಬರಕಾಂತ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here