ತ. ನಾಡಿಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಹರಿಸಲು ಕಾವೇರಿ ಪ್ರಾಧಿಕಾರ ಆದೇಶ

ಮಂಗಳೂರು(ಬೆಂಗಳೂರು): ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿದೆ.

ಸೆ. 13 ರಿಂದ ಮುಂದಿನ 15 ದಿನಗಳವರೆಗೆ 5 ಸಾವಿರ ಕ್ಯುಸೆಕ್ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಸೋಮವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆದಿದ್ದು, ಈ ಸಭೆಯಲ್ಲಿ ಕರ್ನಾಟಕವು ತಮಿಳುನಾಡಿಗೆ ನೀರು ಹರಿಸಬೇಕು ಎಂದು ಆದೇಶಿಸಿದೆ. ಕಾವೇರಿ ಹಾಗೂ ಕೃಷ್ಣಾ ಕಣಿವೆಯಲ್ಲಿ ಭಾರಿ ನೀರಿನ ಕೊರತೆ ಕಾಣಿಸಿಕೊಂಡಿದ್ದು, ಹೀಗಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಪ್ರಮಾಣಪತ್ರ ಸಲ್ಲಿಸಿದೆ. ಈ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಈ ಆದೇಶವು, ರಾಜ್ಯದ ಪಾಲಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚುತ್ತಿರುವ ಮತ್ತು ವಿಸ್ತರಿಸುತ್ತಿರುವ ಬರದ ತೀವ್ರತೆಯನ್ನು ಗಮನಿಸಿ, ಕುಡಿಯುವ ನೀರಿನ ಅಗತ್ಯತೆಗಳು ಮತ್ತು ನೀರಾವರಿಯ ಕನಿಷ್ಠ ಅಗತ್ಯತೆಗಳಿಗೆ ನೀರಿನ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಒಳಹರಿವು ಸುಧಾರಿಸದ ಹೊರತು ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಕರ್ನಾಟಕವು ಪ್ರಾಧಿಕಾರಕ್ಕೆ ತಿಳಿಸಿತ್ತು. ಪ್ರತಿಯಾಗಿ ತಮಿಳುನಾಡು, 6,500 ಕ್ಯೂಸೆಕ್ ಬಾಕಿಯನ್ನು ಒಳಗೊಂಡಂತೆ ಮುಂದಿನ 15 ದಿನಗಳವರೆಗೆ ಒಟ್ಟು 12,500 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು. ಅಂತಿಮವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಎತ್ತಿ ಹಿಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಹರಿಸಲು ಆದೇಶಿಸಿದೆ.

LEAVE A REPLY

Please enter your comment!
Please enter your name here