ಮಂಗಳೂರು(ಚಾಮರಾಜನಗರ): ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಶಾಲಾ ಶಿಕ್ಷಕಿಯನ್ನು ಬೆದರಿಸಿದ ಇಬ್ಬರು ದುಷ್ಕರ್ಮಿಗಳು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಪ್ರಕರಣವೊಂದು ಚಾಮರಾಜನಗರದ ಕೊಳ್ಳೆಗಾಲದಲ್ಲಿ ಬೆಳಕಿಗೆ ಬಂದಿದೆ.
ಹಣ ನೀಡದಿದ್ದರೆ ಚಾಮರಾಜನಗರದಲ್ಲಿ ಶಿಕ್ಷಕಿಯ ಖಾಸಗಿ ಫೋಟೋಗಳ ಫ್ಲೆಕ್ಸ್ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ ಅಬ್ದುಲ್ ಅಸೀಮ್ ಮತ್ತು ಮಯೂರ್ ಎಂಬವರ ವಿರುದ್ದ ಶಿಕ್ಷಕಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. 2 ವರ್ಷಗಳ ಹಿಂದೆ ವಿವಾಹವಾಗಿದ್ದ ಶಿಕ್ಷಕಿಗೆ ಕಳೆದ 7 ವರ್ಷಗಳಿಂದ ಸ್ನೇಹಿತನಾಗಿದ್ದ ಅಬ್ಧುಲ್ ಅಸೀಮ್ ಎನ್ನುವಾತ ಪತಿಯನ್ನ ಬಿಟ್ಟು ಜೊತೆಯಲ್ಲಿ ಬರುವಂತೆ ಶಿಕ್ಷಕಿಗೆ ದುಂಬಾಲು ಬಿದ್ದಿದ್ದ. ಪತಿಯನ್ನ ಬಿಟ್ಟು ಬರದೆ ಇದ್ದರೆ ನಮ್ಮಿಬ್ಬರ ಖಾಸಗಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಶಿಕ್ಷಕಿ ಆತನ ಮಾತಿಗೆ ಸೊಪ್ಪು ಹಾಕದೇ ಇದ್ದಾಗ ಆರೋಪಿಗಳಾದ ಅಬ್ದುಲ್ ಅಸೀಮ್ ಹಾಗೂ ಮಯೂರ್ ಸೇರಿ ಶಿಕ್ಷಕಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಪತಿ ಹಾಗೂ ಕುಟುಂಬಸ್ಥರಿಗೆ ಕಳುಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ ಮಾನಕ್ಕೆ ಹೆದರಿ ಶಿಕ್ಷಕಿ ದೂರು ನೀಡಿರಲಿಲ್ಲ. ಆದರೆ ಆರೋಪಿಗಳು ವಿಡಿಯೋವನ್ನು ಪತಿಗೆ ಕಳುಹಿಸಿದ ಬಳಿಕ ಗಟ್ಟಿ ಮನಸ್ಸು ಮಾಡಿದ ಶಿಕ್ಷಕಿ ಠಾಣೆ ಮೇಟ್ಟಿಲು ಏರಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಿಬ್ಬರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.