ಪತಿಯ ಮೈಗೆ ಮೆಣಸಿನಹುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ – ಪತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ – ದೂರು ದಾಖಲು

ಮಂಗಳೂರು(ಕಾಪು): ಉಡುಪಿಯ ಕಟಪಾಡಿ ಸಮೀಪದ ಮಣಿಪುರದಲ್ಲಿ ಪತ್ನಿಯೊಬ್ಬಳು ತನ್ನ ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ್ದು ಪತಿ ,ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಪತಿ ಮೊಹಮ್ಮದ್ ಅಶ್ರಫ್ ಪತ್ನಿ ಅಫ್ರೀನ್, ಅತ್ತೆ, ಮಾವ ಮತ್ತಿತರರು ಸೇರಿ ಈ ಕೃತ್ಯ ಎಸಗಿದ್ದಾರೆ.

ಮೊಹಮ್ಮದ್‌ ಆಸೀಫ್‌ (22) ಕಾರ್ಕಳ ತಾಲೂಕಿನವರಾಗಿದ್ದು 11 ತಿಂಗಳ ಹಿಂದೆ ಉಡುಪಿ ತಾಲೂಕು ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿನ ನಿವಾಸಿ ಹುಸೈನ್‌ ಅವರ ಮಗಳಾದ ಅಫ್ರೀನ್‌ ಅವರನ್ನು ಮದುವೆಯಾಗಿದ್ದರು. ಮದುವೆಯಾದ ಬಳಿಕ ಅಫ್ರೀನ್‌ ಒಂದೂವರೆ ತಿಂಗಳು ಮೊಹಮ್ಮದ್‌ ಆಸೀಫ್‌ ಮನೆಯಲ್ಲಿದ್ದು, ಆ ಬಳಿಕ ಗಂಡನ ಮನೆಯಲ್ಲಿ ಇರಲು ಇಷ್ಟವಿಲ್ಲವೆಂದು ಮಣಿಪುರದ ತನ್ನ ತವರು ಮನೆಗೆ ತೆರಳಿದ್ದಾಳೆ. ತಾನು ಬೇಕಾದಲ್ಲಿ ತನ್ನ ಮನೆಯಲ್ಲಿಯೇ ಇರುವಂತೆ ತಿಳಿಸಿದ ಮೇರೆಗೆ ಪತಿ ಮೊಹಮ್ಮದ್‌ ಆಸೀಫ್‌ ಸುಮಾರು 9 ತಿಂಗಳಿನಿಂದ ಪತ್ನಿಯ ಮನೆಯಲ್ಲಿ ವಾಸವಿದ್ದಾರೆ. ಮೊಹಮ್ಮದ್‌ ಆಸೀಫ್‌ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ವ್ಯಕ್ತಪಡಿಸುತ್ತಿದ್ದ ಆಫ್ರೀನ್ ಈ ಬಗ್ಗೆ‌ ಪತಿ ಜತೆ ಯಾವಾಗಲೂ ಜಗಳವಾಡುತ್ತಿದ್ದಳು.

ಸೆ.17ರಂದು ಆಸೀಫ್‌ ಸ್ನಾನ ಮಾಡುತ್ತಿದ್ದ ವೇಳೆ ಅಫ್ರೀನ್‌ ಹೊರಗಿನಿಂದ ಬಾಗಿಲು ಬಡಿದಿದ್ದು, ಆಸೀಫ್‌ ಬಾಗಿಲನ್ನು ತೆರೆದಾಗ ಅಫ್ರೀನ್‌ ತನ್ನ ಕೈಯಲ್ಲಿ ಸ್ಟೀಲಿನ ಪಾತ್ರೆಯಲ್ಲಿದ್ದ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಆಸಿಫ್‌ ಮೈ ಮೇಲೆ ಎರಚಿದ್ದಾಳೆ. ಮೈಮೇಲೆ ಬಿಸಿ ನೀರನ್ನು ಹಾಕಿದ ಪರಿಣಾಮ ಆಸೀಫ್‌ ಎಡ ಬದಿಯ ಮುಖ, ದೇಹ, ಎಡಗೈ, ಎಡ ಬದಿಯ ಎದೆ, ಬೆನ್ನು ಬಲಕೈ ಗೆ ಗುಳ್ಳೆ ಎದ್ದಿದ್ದು, ಆಸ್ಪತ್ರೆಗೆ ಹೊರಟ ಆಸೀಫ್‌ ನನ್ನು ಅಫ್ರೀನ್‌, ಅತ್ತೆ ಮೈಮುನಾ, ಮಾವ ಹುಸೈನ್‌ ಹಾಗೂ ನೆರೆಮನೆಯ ಲತೀಫ್‌ ತಡೆದು ಮನೆಯ ರೂಮಿನಲ್ಲಿ ಕೂಡಿ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಸೆ.18ರಂದು ಉಳ್ಳಾಲದ ನಿವಾಸಿ ಜಮಾಲ್ ಎಂಬಾತ ಆಸೀಫ್‌ ಗೆ ಕರೆ ಮಾಡಿ ಕೇಸ್‌ ಕೊಟ್ಟರೆ ನಿನ್ನನ್ನು ಬಿಡುವುದಿಲ್ಲ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ.  ಘಟನೆ ಕುರಿತಂತೆ ಆಸೀಫ್ ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here