ಮಂಗಳೂರು: ನಗರದಲ್ಲಿ ಕೊಲೆ, ಕೊಲೆಯತ್ನ, ಬೆದರಿಕೆ, ಹಣ ವಸೂಲಿ ಹೀಗೆ ಹತ್ತಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಪಡೀಲ್ ಫೈಸಲ್ ನಗರನಿವಾಸಿ ತಲ್ಲತ್ (39)ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಗೋವಾ, ಮುಂಬೈನಲ್ಲಿದ್ದುಕೊಂಡು ರೌಡಿಸಂ ಲೋಕವನ್ನು ನಿಯಂತ್ರಿಸುತ್ತಿದ್ದ ತಲ್ಲತ್ ಗ್ಯಾಂಗ್ ಲೀಡರ್ ಆಗಿದ್ದ ಎನ್ನಲಾಗಿದೆ. ಕಳೆದ 20 ವರ್ಷಗಳಿಂದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತಲ್ಲತ್ ಇತ್ತೀಚೆಗೆ ಮುಂಬೈನಿಂದ ಊರಿಗೆ ಬಂದಿದ್ದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೊಟ್ಟಾರದಲ್ಲಿ ಸೆ.18ರಂದು ಬಂಧಿಸಿ, ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಲ್ಲತ್ ವಿರುದ್ಧ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಕೊಣಾಜೆ, ಬರ್ಕೆ, ಮುಂಬೈ ಮುಂತಾದ ಕಡೆಗಳಲ್ಲಿ ಹತ್ಯೆ, ಜೀವ ಬೆದರಿಕೆ, ಹಫ್ತಾ ವಸೂಲಿ, ದರೋಡೆ, ಕೊಲೆಯತ್ನ ಕೊಲೆ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ, ಅಪಹರಣ ಹೀಗೆ ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.