ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ – ಜೈಲಿನಿಂದ ಬಿಡುಗಡೆಗೊಂಡು ಹಳೇ ಚಾಳಿ ಆರಂಭಿಸಿದ ಆರೋಪಿ

ಮಂಗಳೂರು: ನಗರವನ್ನು ಡ್ರಗ್ಸ್ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಪ್ಪಿನಂಗಡಿ, ತೆಕ್ಕಾರು ನಿವಾಸಿ ಪಿ.ಎಸ್. ಅಬ್ದುಲ್ ಅಜೀಜ್(31), ಸುರತ್ಕಲ್, ಕಾಟಿಪಳ್ಳ 3ನೇ ಬ್ಲಾಕ್, ಆಶ್ರಯ ಕಾಲನಿ ನಿವಾಸಿ ಅಕ್ಷಿತ್ ಕುಮಾರ್(26) ಎಂದು ಗುರುತಿಸಲಾಗಿದೆ. ಅಬ್ದುಲ್ ಅಜೀಜ್ ಹಾಗೂ ಅಕ್ಷಿತ್ ಕುಮಾರ್ ಮಂಗಳೂರು ನಗರದ ಕೆ ಎಸ್ ರಾವ್ ರಸ್ತೆ ಪರಿಸರದಲ್ಲಿ ಮಾದಕದ್ರವ್ಯ ಎಂಡಿಎಂಎಯನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯನ್ವಯ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ 35 ಗ್ರಾಂ ತೂಕದ, 1,75,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಎರಡು ಮೊಬೈಲ್ ಫೋನ್ ಗಳು, ನಗದು 600 ರೂ. ನಗದು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,96,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಅಬ್ದುಲ್ ಅಜೀಜ್ ಎಂಬಾತ ಈ ಹಿಂದೆ ಉಪ್ಪಿನಂಗಡಿ, ವಿಟ್ಲ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಜೈಲುಪಾಲಾಗಿದ್ದ. 15 ದಿನಗಳ ಹಿಂದೆಯಷ್ಟೇ ಆತ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ.

LEAVE A REPLY

Please enter your comment!
Please enter your name here