ಬಿಜೆಪಿ ಜೆಡಿಎಸ್‌ ಮೈತ್ರಿ – ದಸರಾ ಬಳಿಕ ಸೀಟು ಹಂಚಿಕೆ ಮಾತುಕತೆ – ಜೆಡಿಎಸ್‌ ವಕ್ತಾರೆ ಯು ಟಿ ಫರ್ಝಾನ ರಾಜಿನಾಮೆ

ಮಂಗಳೂರು(ಬೆಂಗಳೂರು): ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲೆ ಜ್ವಾಲಾಮುಖಿಯಂತೆ ಮುಗಿಬಿದ್ದಿದ್ದ ಜೆಡಿಎಸ್, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ. ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ದಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು, ಎನ್ ಡಿ ಎ ಬೆಂಬಲಿಸುವ ಕುರಿತು ೊಪ್ಪಿಗೆ ಸೂಚಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ, ಕರ್ನಾಟಕದ ರಾಜಕಾರಣದ ಕುರಿತು ಚರ್ಚೆ ನಡೆಸಿದ್ದರು.

ಎನ್ ಡಿ ಎ ಭಾಗವಾಗಿರುವ ಜೆಡಿಎಸ್ ಪಕ್ಷದ ನಾಯಕರ ನಡೆಯನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಎಚ್ ಡಿ ರೇವಣ್ಣ ಅವರಿಗೆ ಸ್ವಾಗತ ಕೋರಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಾರ್ಗದರ್ಶನ ಮತ್ತು ಆಶೀರ್ವಾದ ದೊರಕುತ್ತದೆ ಎಂದು ಬೊಮ್ಮಾಯಿ ಟ್ವಿಟ್ ಮಾಡಿದ್ದಾರೆ.

ಒಳ್ಳೆಯ ದಿನ, ಒಳ್ಳೆಯ ಸಮಯ ನೋಡಿಕೊಂಡು ಯಾರಿಗೆಷ್ಟು ಕ್ಷೇತ್ರಗಳು ಎಂಬುದರ ಬಗ್ಗೆ ದಸರಾ ಬಳಿಕ ನಿರ್ಧಾರ ಮಾಡಲಾಗುವುದು ಎಂದು ಮೈತ್ರಿ ಬಳಿಕ ಎಚ್‌ ಡಿ ಕುಮಾರ ಸ್ವಾಮಿ ಪ್ರತಿಕ್ರೀಯಿಸಿದ್ದಾರೆ. ಜೆಡಿಎಸ್‌ ಪಕ್ಷದ ಮೈತ್ರಿ ವಿಚಾರ ಅಧಿಕೃತವಾಗಿ ಘೋಷಣೆ ಬೆನ್ನಲ್ಲೆ ಜೆಡಿಎಸ್‌ ರಾಜ್ಯ ವಕ್ತಾರೆ ಮಂಗಳೂರಿನ ಯು ಟಿ ಫರ್ಝಾನ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

LEAVE A REPLY

Please enter your comment!
Please enter your name here