ಮಂಗಳೂರು(ಬೆಂಗಳೂರು): ಕರಾವಳಿಯ ಗಂಡುಕಲೆ, ಸಾಂಸ್ಕೃತಿಕ ಕ್ರೀಡೆ ಕಂಬಳ ಮೊದಲ ಬಾರಿಗೆ ರಾಜ್ಯದ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಬೆಂಗಳೂರು ಕಂಬಳ ಸಮಿತಿ ಸಭೆಯು ಬೆಂಗಳೂರಿನ ಕದಂಬ ಹೊಟೇಲ್ ಸಭಾಂಗಣದಲ್ಲಿ ಅ. 6 ರಂದು ನಡೆಯಿತು. ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಪುತ್ತೂರು ಶಾಸಕ ಅಶೋಕ್ ರೈ ಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರಾದ ಅಶೋಕ್ ರೈಯವರು ಮೊಟ್ಟ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಕಂಬಳವನ್ನು ಆಯೋಜನೆ ಮಾಡಲಾಗಿದೆ. ಕರಾವಳಿಯ ಜನಪದ ಕ್ರೀಡೆಯನ್ನು ಇಡೀ ದೇಶವೇ ವೀಕ್ಷಣೆ ಮಾಡಲಿದೆ ಇದಕ್ಕಾಗಿ ಈಗಾಗಲೇ ಸಿದ್ದತೆಗಳು ನಡೆಯುತ್ತಿದ್ದು ದ ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಂಬಳ ಕೋಣದ ಮಾಲಕರುಗಳ ಸಭೆಯನ್ನು ಕರೆಯಲಾಗಿದ್ದು ಕಂಬಳಕ್ಕೆ ಅವರಿಂದ ಪೂರ್ಣ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿರುವ ತುಳುನಾಡಿನ ವಿವಿಧ ಜಾತಿಯ ಸಂಘಟನೆಗಳ ಬೆಂಬಲವೂ ದೊರಕಿದ್ದು ಕಂಬಳ ಯಶಸ್ವಿಯಾಗಿ ನಡೆಯಲಿ ಎಂಬುದು ಎಲ್ಲರ ಆಶಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಧ್ಯೇಯ ವಾಕ್ಯದಡಿ ಎಲ್ಲರೂ ಒಗ್ಗೂಡಿ ಸಮಿತಿಯನ್ನು ರಚನೆ ಮಾಡಲಾಯಿತು. ಸಭೆಯಲ್ಲಿ 300 ಕ್ಕೂ ಮಿಕ್ಕಿ ವಿವಿಧ ಸಂಘಟನೆಯ ಪದಾಧಿಕಾರಿಗಳು, ಕಂಬಳಾಭಿಮಾನಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಕಂಬಳ ಮುಖ್ಯಸ್ಥರುಗಳಾದ ಗುಣರಂಜನ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ನಗರಪಾಲಿಕಾ ಸದಸ್ಯ ಉಮೇಶ್ ಶೆಟ್ಟಿ, ರಾಜೇಂದ್ರ, ಮುರಳೀಧರ್ ಹೆಗ್ಡೆ, ರಾಘವೇಂದ್ರ ರಾವ್, ಸುಂದರ್ ರಾಜ್ ಶೆಟ್ಟಿ, ಮುರಳೀದರ್ ರೈ ಮಠಂತಬೆಟ್ಟು, ಉದಯ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಯ ಪ್ರಮುಖರು ಸಲಹೆ ಸೂಚನೆಗಳನ್ನು ನೀಡಿದರು.