ಮಂಗಳೂರು(ಮುಂಬೈ): ರಾಮ ಮಂದಿರ ಉದ್ಘಾಟನೆ ವೇಳೆ ತಾವು ಹಾಡಿದ ಶ್ಲೋಕಗಳು, ಭಜನೆಗಳು ಪ್ರಸಾರ ಕಾಣಬೇಕು ಎನ್ನುವ ಉದ್ದೇಶದಿಂದ ತಮ್ಮ ಜೀವನದ ಕೊನೆಯ ದಿನಗಳಲ್ಲಿ ಭಾರತದ ಶ್ರೇಷ್ಠ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಹಲವು ಶ್ರೀರಾಮನ ಭಜನೆ, ಶ್ಲೋಕಗಳನ್ನು ರೆಕಾರ್ಡ್ ಮಾಡಿಟ್ಟಿರುವ ವಿಚಾರ ಮಂಗೇಶ್ಕರ್ ಆಪ್ತ ವಲಯದಿಂದ ಬೆಳಕಿಗೆ ಬಂದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿತ್ತು. 2024ರ ಜನವರಿ ತಿಂಗಳಲ್ಲಿ ರಾಮ ಮಂದಿರ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಈ ವಿಶೇಷ ಸಂದರ್ಭಕ್ಕಾಗಿ ಲತಾ ಮಂಗೇಶ್ಕರ್ ಅವರು ಶ್ರೀರಾಮನ ಭಜನೆಗಳನ್ನು ಸಿದ್ಧಪಡಿಸಿಟ್ಟಿದ್ದಾರೆ ಎಂದು ಲತಾ ಮಂಗೇಶ್ಕರ್ ಕುಟುಂಬದೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಮಯೂರೇಶ್ ಪೈ ಖಚಿತಪಡಿಸಿದ್ದಾರೆ. ರಾಮ ಮಂದಿರದಲ್ಲಿ ತಮ್ಮ ಧ್ವನಿ ಕೇಳಬೇಕು ಎಂಬುದು ಲತಾ ಅವರ ಆಸೆಯಾಗಿತ್ತು ಎಂದು ಮಯೂರೇಶ್ ಹೇಳಿದ್ದಾರೆ.