ಮಂಗಳೂರು(ಇಸ್ರೇಲ್): ಪ್ಯಾಲೆಸ್ಟೀನ್ ಹಮಾಸ್ ಉಗ್ರಗಾಮಿಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಎರಡೂ ದೇಶಗಳ ಸುಮಾರು 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಶನಿವಾರ ಬೆಳಗ್ಗೆ ಆರಂಭವಾದ ಪ್ಯಾಲೆಸ್ಟೀನ್ ಉಗ್ರಗಾಮಿ ಗುಂಪು ಹಮಾಸ್ ಆರಂಭಿಸಿದ ದಾಳಿಯಲ್ಲಿ ಇಸ್ರೇಲ್ನಲ್ಲಿ ಕನಿಷ್ಠ 300 ಜನರು ಸಾವನ್ನಪ್ಪಿದ್ದಾರೆ . ಪ್ರತೀಕಾರವಾಗಿ ಮಿಲಿಟರಿ ಕಾರ್ಯಾಚರಣೆ ನಡೆಸಿದ ಇಸ್ರೇಲ್ ರಕ್ಷಣಾ ಪಡೆ ಗಾಝಾ ಮತ್ತು ವೆಸ್ಟ್ ಬ್ಯಾಂಕ್ನಲ್ಲಿ ದಾಳಿ ನಡೆಸಿದ ಪರಿಣಾಮ 230 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಇಸ್ರೇಲ್ನಲ್ಲಿ ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರ ನಡುವೆ ತೀವ್ರ ಹೋರಾಟ ಇನ್ನೂ ಮುಂದುವರಿದಿದೆ. ಇತ್ತೀಚಿನ ವರದಿಯ ಪ್ರಕಾರ, ಸ್ಡೆರೋಟ್ ಮತ್ತು ಕಿಬ್ಬುಟ್ಜ್ ನಿರ್ ಆಮ್ನಂತಹ ಪ್ರದೇಶಗಳಲ್ಲಿ ರಾಕೆಟ್ ದಾಳಿ ನಡೆಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಎಂದು ಇಸ್ರೇಲ್ ಸೇನಾ ವಕ್ತಾರರು ತಿಳಿಸಿದ್ದಾರೆ. ಪ್ಯಾಲೆಸ್ಟೀನ್ ಉಗ್ರಗಾಮಿಗಳ ಅತಿ ದೊಡ್ಡ ದಾಳಿಯಲ್ಲಿ ಇಸ್ರೇಲ್ನಲ್ಲಿ 1,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ನಡೆಸಿದ ಆಪರೇಷನ್ ಐರನ್ ಸ್ವೋರ್ಡ್ಸ್ನಲ್ಲಿ ಕನಿಷ್ಠ 1,700 ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ಡಿಫೆನ್ಸ್ ಫೋರ್ಸ್ ಮತ್ತು ಹಮಾಸ್ ನಡುವಿನ ಹೋರಾಟವು ಭಾನುವಾರವೂ ಮುಂದುವರೆದಿದೆ. ದಕ್ಷಿಣ ಇಸ್ರೇಲ್ನ ಹಲವು ಭಾಗಗಳಲ್ಲಿ ರಾಕೆಟ್ ಸೈರನ್ಗಳು ಸದ್ದು ಮಾಡುತ್ತಲೇ ಇವೆ ಎಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ.
ಇಸ್ರೇಲಿ ಸೇನಾ ವಕ್ತಾರರು ಸಾಮಾಜಿಕ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವರದಿಯಲ್ಲಿ, ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿಲ್ಲ ಎಂದು ತಿಳಿಸಿದ್ದಾರೆ. ಯುದ್ಧ ಶುರುವಾದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಾಗರಿಕರು ತಮ್ಮ ಮೂಲ ನಿವಾಸಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಹಮಾಸ್ ಬಂಡುಕೋರರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಹಮಾಸ್ ನಾಯಕರ ಪ್ರಕಾರ ಅವರ ವಶದಲ್ಲಿರುವ ಇಸ್ರೇಲಿ ಕೈದಿಗಳು ಡಜನ್ಗಳಿಗಿಂತ ಹೆಚ್ಚಿದ್ದು,ಇಸ್ರೇಲ್ನ ಜೈಲಿನಲ್ಲಿರುವ ಎಲ್ಲ ಪ್ಯಾಲೆಸ್ಟೀನ್ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಷರತ್ತು ವಿಧಿಸಿದ್ದಾರೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ಗೆ 8 ಶತಕೋಟಿ ಡಾಲರ್ ಮೌಲ್ಯದ ತುರ್ತು ಮಿಲಿಟರಿ ನೆರವು ಪ್ಯಾಕೇಜ್ ಅನ್ನು ಅನುಮೋದಿಸಿದ್ದಾರೆ . ಬೈಡೆನ್ ಶನಿವಾರ ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರೊಂದಿಗೆ ಮಾತನಾಡಿ ಇಸ್ರೇಲ್ನ ರಕ್ಷಣೆಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಹೈಫಾ ಅಂತರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಸ್ರೇಲ್ ಗೆ ತೆರಳಿದ್ದ ಬಾಲಿವುಡ್ ನಟಿ ನುಸ್ರತ್ ಭರೂಚ ಯುದ್ದ ಪೀಡಿತ ಪ್ರದೇಶದಲ್ಲಿ ಸಿಲುಕಿರುವುದಾಗಿ ಅವರ ತಂಡದ ಸದಸ್ಯರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ