ಅ.15 ರಂದು ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಮಹಿಷ ದಸರಾ ಆಯೋಜನೆ

ಮಂಗಳೂರು(ಉಡುಪಿ): ಮಹಿಷ ಮಂಡಲವನ್ನಾಳಿದ ದ್ರಾವಿಡ ದೊರೆ ಮಹಿಷಾಸುರ ಮಹಾರಾಜರ ಕುರಿತು ಜನತೆಗೆ ಅರಿವಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಅ.15 ರಂದು ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಮಹಿಷ ದಸರಾ ಹಾಗೂ ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಕೋಟ್ಯಾನ್ ತಿಳಿಸಿದ್ದಾರೆ.

ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೂರ್ವಾಗ್ರಹ ಪೀಡಿತ ಹಿಂದೂ ಧರ್ಮಾಂಧರು ಮಹಿಷಾಸುರ ಒಬ್ಬ ದುಷ್ಟ, ನೀಚ, ಪ್ರಜಾಕಂಟಕ, ನರಭಕ್ಷಕ ಇತ್ಯಾದಿಯಾಗಿ ಆತನನ್ನು ಒಬ್ಬ ವಿಲನ್ ಎಂಬಂತೆ ಚಿತ್ರಿಸಿರುವುದನ್ನು ಕಾಣುತ್ತೇವೆ. ಆದರೆ ಮಹಿಷಾಸುರ ಈ ದೇಶದ ಅಸುರ ಸಾಮ್ರಾಜ್ಯದ ನಾಯಕರಲ್ಲಿ ಅಗ್ರಗಣ್ಯನಾಗಿದ್ದು, ಆರ್ಯ ಮತ್ತು ಬುದ್ಧಪೂರ್ವ ಪ್ರಾಗೈತಿಹಾಸ ಯುಗದ ಚಕ್ರೇಶ್ವರ, ಮೈಸೂರಿನ ಹುಟ್ಟಿಗೆ ಕಾರಣನಾದವ ಹಾಗೂ ಪ್ರಾಚೀನ ಮಹಿಷಾಮಂಡಲದ ದೊರೆಯಾಗಿದ್ದಾತ ಎಂದರು. ಬಹುಜನರ ಭಾಗ್ಯವಿದಾತ, ಬೌದ್ಧರ ನೈಜ ಇತಿಹಾಸವನ್ನು ಮಹಿಷ ಪರಂಪರೆಯನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಮತ್ತು ವೈದಶ ಸಂಸ್ಕೃತಿಗೆ ಪರ್ಯಾಯವಾಗಿ ಪ್ರತಿಸಂಸ್ಕೃತಿ ಸೃಷ್ಟಿಸುವ ಸಲುವಾಗಿ ಅಂಬೇಡ್ಕರ್ ಯುವ ಸೇನೆ ಆಯೋಜಿಸಿರುವ ಮಹಿಷ ದಸರಾ ಸಾರ್ವಕಾಲಿಕ ಮಹತ್ವ ಹೊಂದಲಿದೆ ಎಂದು ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ತಿಳಿಸಿದರು.

ಅ.15ರಂದು ಬೆಳಗ್ಗೆ 10:30ಕ್ಕೆ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದಿಂದ ವಿವಿಧ ವಾಹನಗಳ ಜಾಥಾದೊಂದಿಗೆ ಮಹಿಷ ರಾಜನ ಟ್ಯಾಬ್ಲೋ ಮೆರವಣಿಗೆ ಹೊರಟು ಜೋಡುಮಾರ್ಗವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಬನ್ನಂಜೆ ಮೂಲಕ ಕರಾವಳಿ ಬೈಪಾಸ್‌ನಿಂದ ಆದಿ ಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ ಹಾಗೂ ಮಹಿಷಾಸುರ ಯಾರು ಎಂಬ ವಿಚಾರಸಂಕಿರಣ 11:00 ಗಂಟೆಗೆ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಕಲಬುರಗಿಯ ಸಂಶೋಧಕ ಡಾ. ವಿಠಲ ವಗ್ಗನ್ ಕಾರ್ಯಕ್ರಮ ಉದ್ಘಾಟಿಸಿ ವಿಚಾರ ಮಂಡನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಚಿಂತಕ ನಾರಾಯಣ ಮಣೂರು ಹಾಗೂ ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ ಭಾಗವಹಿಸಲಿದ್ದಾರೆ ಎಂದು ಹರೀಶ್ ಸಾಲ್ಯಾನ್ ತಿಳಿಸಿದರು. ನಾಡಿನ ಪ್ರಗತಿಪರ ಚಳುವಳಿಗಾರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತರು, ದಲಿತ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ರಾಕ್ಷಸರೆಲ್ಲಾ ರಕ್ಷಕರು, ಈ ದೇಶದ ಮೂಲನಿವಾಸಿಗಳು ಎಂಬುದನ್ನು ಸಾಬೀತು ಪಡಿಸುವಂತೆ ಅವರು ಮನವಿ ಮಾಡಿದರು.

ಸಾಮ್ರಾಟ್ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದಿಂದಾದ ಸಾವುನೋವು ಗಳಿಂದ ಮನಪರಿವರ್ತನೆಯಾಗಿ ಶಸ್ತ್ರವನ್ನು ತ್ಯಜಿಸಿ ಇನ್ನು ಮುಂದೆ ಯುದ್ಧ ಮಾಡುವುದಿಲ್ಲವೆಂದು ಶಪಥ ಮಾಡುತ್ತಾನೆ. ಆಗ ಒಂಭತ್ತು ದಿನಗಳ ಕಾಲ ಉಪವಾಸ ಮಾಡಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾನೆ. ಈ ದಿನವನ್ನೇ ವಿಜಯ ದಶಮಿ ದಿನವೆಂದು ಆಚರಿಸುತ್ತಾ ಬರಲಾಗುತ್ತಿತ್ತು. ಆದರೆ ಪುರೋಹಿತ ಶಾಹಿಗಳು ಅದನ್ನು ತಿರುಚಿ ಕಾಲ್ಪನಿಕ ದೇವಿಯ ಸುಳ್ಳಿನ ಕತೆ ಕಟ್ಟಿ ದಸರಾ ಉತ್ಸವವನ್ನು ಆಚರಣೆಗೆ ತಂದರು ಎಂದು ದಲಿತ ಚಿಂತಕ ಜಯನ್ ಮಲ್ಪೆ ತಿಳಿಸಿದರು. ಸುಳ್ಳೆಂಬ ಮೋಡಗಳು ಸತ್ಯವೆಂಬ ಸೂರ್ಯನನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದೇ ರೀತಿ ಪುರಾಣವೆಂಬ ಕತ್ತಲೆಯಿಂದ ಇತಿಹಾಸವೆಂಬ ಬೆಳಕಿನೆಡೆಗೆ ದಲಿತ ಸಮಾಜವನ್ನು ಮುನ್ನಡೆಸುವುದು ಇಂದಿನ ಬಹುದೊಡ್ಡ ಅಗತ್ಯತೆಯಾಗಿದೆಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಯುವ ಸೇನೆಯ ದಯಾನಂದ ಕಪ್ಪೆಟ್ಟು, ಲೋಕೇಶ್ ಪಡುಬಿದ್ರಿ, ಸಂಜೀವ ಬಳ್ಳೂರು, ಗಣೇಶ ನೆರ್ಗಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here