ಮಂಗಳೂರು(ಮುಂಬೈ): ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ, ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಕೆಡವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ನಿನ್ನೆ ರಾತ್ರಿ ಎನ್ಐಎಗೆ ಇಮೇಲ್ ಬಂದಿದ್ದು, 500 ಕೋಟಿ ಮತ್ತು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಬಿಡುಗಡೆಗೆ ಮಾಡುವಂತೆ ಬೇಡಿಕೆ ಇರಿಸಿದೆ. ದಾಳಿಗಾಗಿ ಭಾರತದ ವಿವಿಧ ಭಾಗಗಳಲ್ಲಿ ಜನರನ್ನು ನಿಯೋಜಿಸಲಾಗಿದೆ ಎಂದು ಬೆದರಿಕೆಯಲ್ಲಿ ಹೇಳಲಾಗಿದೆ.
ಸದ್ಯ ಬಿಷ್ಣೋಯ್ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ಯುರೋಪ್ ನಿಂದ ಮೇಲ್ ಬಂದಿರುವ ಶಂಕೆ ವ್ಯಕ್ತವಾಗಿದೆ. ನಂತರ ಎನ್.ಐ.ಎ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎನ್ಐಎಯಿಂದ ತಮಗೆ ಇಮೇಲ್ ಬಂದಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಇತರ ಏಜೆನ್ಸಿಗಳಿಗೂ ಮಾಹಿತಿ ನೀಡಲಾಗಿದೆ. ಇಮೇಲ್ನ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ವಿಶ್ವಕಪ್ ನಡೆಯುವ ಸ್ಥಳಗಳ ಹೊರಗೆ ಭದ್ರತೆ ಹೆಚ್ಚಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಷ್ಟೇ ಭದ್ರತೆ ಹೆಚ್ಚಿಸಿದರೂ ದಾಳಿ ನಡೆಸಲಾಗುವುದು ಹಾಗೂ 500 ಕೋಟಿ ಮತ್ತು ಲಾರೆನ್ಸ್ ಬಿಷ್ಣೋಯ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಇಮೇಲ್ ನಲ್ಲಿ ಹೇಳಲಾಗಿದೆ. ಈ ಹಿಂದೆ ವಿಶ್ವಕಪ್ ಪಂದ್ಯಗಳಿಗೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿಶ್ವಕಪ್ ವೇಳೆ ನಿಜ್ಜರ್ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಪನ್ನು ಬೆದರಿಕೆ ಹಾಕಿದ್ದಾನೆ.