ಮಂಗಳೂರು(ಬೆಂಗಳೂರು): ಗಗನಯಾನ ಯೋಜನೆಗಾಗಿ ಮಾನವರಹಿತ ಹಾರಾಟ ಪರೀಕ್ಷೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಮುಂದುವರಿಯುತ್ತಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಅ.7ರಂದು ಘೋಷಿಸಿದೆ.
ಪ್ರಸಕ್ತ, ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಶನ್-1 (ಟಿವಿ-ಡಿ1)ಕ್ಕಾಗಿ ಸಿದ್ಧತೆಗಳನ್ನು ನಡೆಸುವತ್ತ ಗಮನ ಕೇಂದ್ರೀಕರಿಸಲಾಗಿದೆ ಎಂದು ಅದು ಹೇಳಿದೆ. ಇದು ಕ್ರೂ ಎಸ್ಕೇಪ್ ಸಿಸ್ಟಮ್ನ ಯಶಸ್ವಿ ನಿರ್ವಹಣೆಯತ್ತ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ. ಗಗನಯಾನ ಯೋಜನೆಗಾಗಿ ಮಾನವರಹಿತ ಹಾರಾಟ ಪರೀಕ್ಷೆಗಳನ್ನು ಆರಂಭಿಸಲು ಇಸ್ರೊ ಸಿದ್ಧವಾಗಿದೆ. ಕ್ರೂ ಎಸ್ಕೇಪ್ ಸಿಸ್ಟಮ್ನ ನಿರ್ವಹಣೆಯನ್ನು ಪ್ರದರ್ಶಿಸುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಶನ್-1 ರ ಸಿದ್ಧತೆಗಳು ಚಾಲ್ತಿಯಲ್ಲಿವೆ ಎಂದು ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಇಸ್ರೊ ತಿಳಿಸಿದೆ. ಮೊದಲ ಡೆವೆಲಪ್ಮೆಂಟ್ ಫ್ಲೈಟ್ ಟೆಸ್ಟ್ ವೆಹಿಕಲ್ ನ ಸಿದ್ಧತೆಯು ಅಂತಿಮ ಹಂತಗಳಲ್ಲಿದೆ ಹಾಗೂ ಈ ತಿಂಗಳ ಕೊನೆಯ ವೇಳೆಗೆ ಅದನ್ನು ಉಡಾಯಿಸಬಹುದು ಎಂಬ ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಇಸ್ರೊ ತಿಳಿಸಿದೆ. ಈ ಪರೀಕ್ಷೆಯ ಯಶಸ್ಸಿನ ಆಧಾರದಲ್ಲಿ ಮುಂದಿನ ಅರ್ಹತಾ ಪರೀಕ್ಷೆಗಳು ಮತ್ತು ಮಾನವರಹಿತ ಹಾರಾಟಗಳನ್ನು ನಡೆಸಲಾಗುವುದು ಎಂದು ಇಸ್ರೋ ಹೇಳಿದೆ.