ಮಂಗಳೂರು: ಭಾರತ ಉಳಿಸಲು ಹಿಂದೂಗಳು ಒಟ್ಟಾಗುವ ಅವಶ್ಯಕತೆಯಿದ್ದು, ರಾಷ್ಟ್ರಭಕ್ತಿಯ ಕಿಚ್ಚು ನಮ್ಮೊಳಗಿರಲಿ ಎಂದು ಮಧ್ಯಪ್ರದೇಶದ ಸಾಧ್ವಿ ದೇವಿ ಸರಸ್ವತಿ ಜೀ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷದ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭ ಬಜರಂಗದಳ ವತಿಯಿಂದ ಶೌರ್ಯ ಜಾಗರಣಾ ಯಾತ್ರೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಸ್ತಿಪಡ್ಪು ಮೈದಾನದಲ್ಲಿ ನಡೆದ ಜಾಗೃತ ಹಿಂದೂ ಸಮಾವೇಶದಲ್ಲಿ ಅ.8ರಂದು ಅವರು ದಿಕ್ಸೂಚಿ ಭಾಷಣ ಮಾಡಿದರು.
ಶಿವಮೊಗ್ಗ ಘಟನೆ ಕುರಿತು ಪ್ರಸ್ತಾಪಿಸಿದ ಅವರು ನಾನು ಮುಸಲ್ಮಾನ ವಿರೋಧಿಯಲ್ಲ, ಆದರೆ ಹಿಂದೂಗಳ ವಿರೋಧಿಯಾಗಿರುವ ಸನಾತನ ಧರ್ಮದ ವಿರುದ್ಧ ಮಾತನಾಡುವವರನ್ನು ವಿರೋಧಿಸುತ್ತೇನೆ ಎಂದರು. ಹಿಂದೂಗಳಲ್ಲಿ ಒಗ್ಗಟ್ಟು ಇರಬೇಕು ಎಂದ ಅವರು ನಾವು ಸಂಘಟನೆ ಅಡಿಯಲ್ಲಿ ಒಂದೇ ಜಾತಿಗೆ ಸೇರಿದವರು, ನಮ್ಮಲ್ಲಿ ಒಗ್ಗಟ್ಟಿರಬೇಕು. ಹನುಮಂತನಂತೆ ಮುಷ್ಠಿ ಎತ್ತಬೇಕು ಎಂದರು. ಆರೆಸ್ಸೆಸ್ ನ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಮಾತನಾಡಿ, ವಿಹಿಂಪ, ಬಜರಂಗದಳ ಕಾರ್ಯಕರ್ತರು ವಿರಮಿಸದೆ ಕೆಲಸ ಮಾಡಬೇಕು, ಮಲಗಿದವರನ್ನು ಎಬ್ಬಿಸುವ ಕಾರ್ಯ ಮಾಡಬೇಕು. ಶೌರ್ಯ ವಿಜೃಂಭಿಸಿದರೆ, ಕ್ರೌರ್ಯ ತನ್ನಷ್ಟಕೆ ನಾಶವಾಗುತ್ತದೆ ಶೌರ್ಯಕ್ಕೆ ಶೀಲ ಇಲ್ಲದಿದ್ದರೆ ರಾಕ್ಷಸೀ ಪ್ರವೃತ್ತಿ ಬೆಳೆಯುತ್ತದೆ ಎಂದರು. ಶೌರ್ಯ ಜಾಗರಣಾ ರಥಯಾತ್ರೆ ಸ್ವಾಗತ ಸಮಿತಿ ರಘು ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕರಾಧ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಸಹಿತ ಪ್ರಮುಖರು ಸಭೆಯಲ್ಲಿದ್ದರು. ವಿಶ್ವ ಹಿಂದು ಪರಿಷದ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ ಬಂಟ್ವಾಳ ತಾಲೂಕಿಗೆ ಭಾನುವಾರ ಆಗಮಿಸಿದ್ದು, ಬಿ.ಸಿ.ರೋಡ್ ಸಮೀಪ ಬಸ್ತಿಪಡ್ಪುವಿನಲ್ಲಿ ಜಾಗೃತ ಹಿಂದೂ ಸಮಾವೇಶ ನಡೆಯಿತು. ಇದಕ್ಕೂ ಮುನ್ನ ಮಾಣಿ ಜಂಕ್ಷನ್ ಗೆ ಯಾತ್ರೆ ಪ್ರವೇಶಿಸಿ, ಅಲ್ಲಿ ಸಂಘಪರಿವಾರದ ಪ್ರಮುಖರು ಪುಷ್ಪಾರ್ಚನೆ ಮೂಲಕ ರಥವನ್ನು ಸ್ವಾಗತಿಸಿದರು.