ಮಂಗಳೂರು: ಹೊನ್ನಾಳಿ ಮಾಜಿ ಶಾಸಕ, ಬಿಜೆಪಿಯ ಫೈರ್ ಬ್ರಾಂಡ್ ಆಗಿದ್ದ ರೇಣುಕಾಚಾರ್ಯ ಬಿಜೆಪಿ ವಿರುದ್ದ ಸಾರಿದ ಸಮರ ಅಂತಿಮ ಹಂತಕ್ಕೆ ಬಂದು ನಿಂತಿದೆ. ರಾಜ್ಯ ಬಿಜೆಪಿ ಸಮರ್ಥ ನಾಯಕರಿಲ್ಲದೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಹೇಳುವ ಮೂಲಕ ರೇಣುಕಾಚಾರ್ಯ ಪಕ್ಷದಿಂದ ಒಂದು ಕಾಲು ಹೊರಗಿಟ್ಟಂತಾಗಿದೆ ಎಂದು ವಿಮರ್ಶಿಸಲಾಗುತ್ತಿದೆ.
ಯಡಿಯೂರಪ್ಪನವರ ಪರ ಬ್ಯಾಟ್ ಬೀಸಿದ್ದ ರೇಣುಕಾಚಾರ್ಯ, ರಾಜ್ಯದಲ್ಲಿ ಬಿಜೆಪಿ ಆಸ್ತಿತ್ವ ಉಳಿಯಬೇಕೆಂದರೆ, ಯಡಿಯೂರಪ್ಪನವರಿಗೆ ಜವಾಬ್ದಾರಿ ನೀಡುವಂತೆ ಆಗ್ರಹಿಸಿದ್ದರು. ಹೀಗೆ ಹೇಳುತ್ತಲೇ ರೇಣುಕಾಚಾರ್ಯ ಕಾಂಗ್ರೇಸ್ಸಿನ ಪಡಸಾಲೆಯಲ್ಲಿ ಕಾಣಿಸಿಕೊಂಡಿದ್ದರು. ಬಿಜೆಪಿ ವಿರುದ್ಧ ಒಂದೊಂದೇ ಬಾಣ ಹೂಡುತ್ತಾ ಬಂದ ರೇಣುಕಾಚಾರ್ಯ, ನವೆಂಬರ ತಿಂಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಅವರ ಆಪ್ತವಲಯದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ರೇಣುಕಾಚಾರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂಪರ್ಕದಲ್ಲಿರುವುದಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಬೋಸರಾಜ್ ತಿಳಿಸಿದ್ದಾರೆ. ಈಗಾಗಲೇ ರೇಣುಕಾಚಾರ್ಯರವರು ನನ್ನೊಂದಿಗೆ ಮಾತನಾಡಿದ್ದಾರೆ. ಎಷ್ಟು ಮಂದಿ ನಾಯಕರು ಮಾತನಾಡಿದ್ದಾರೆಂದು ಈಗಲೇ ಹೇಳುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.