ಮಂಗಳೂರು(ಬೆಂಗಳೂರು): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಿರುವುದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು, ಜಾತಿ ಜನಗಣತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾತಿ ಜನಗಣತಿ ಮಾಡಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬುವುದಾಗಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಸರಕಾರಕ್ಕೆ ಶೀಘ್ರವಾಗಿ ಜಾತಿ ಜನಗಣತಿ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ ಹೆಗ್ಡೆಯವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದು, ನವೆಂಬರ 25 ರ ಒಳಗೆ ಜಾತಿ ಜನಗಣತಿ ವರದಿ ಸರಕಾರದ ಕೈ ಸೇರಲಿದೆ. ಲೋಕಸಭಾ ಚುನಾವಣೆಗೂ ಮುನ್ನ, ಜಾತಿ ಜನಗಣತಿ ವರದಿ ಬಹಿರಂಗ ಪಡಿಸಲು ಯೋಚಿಸಲಾಗಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಹಿಂದುಳಿದ ವರ್ಗ ದೊಡ್ಡ ಸಂಖ್ಯೆಯಲ್ಲಿದೆ ಎಂದು ಹೇಳಲಾಗುತ್ತಿದೆ. 2019 ರಲ್ಲಿ ಎಚ್ ಡಿ ಕುಮಾರಸ್ವಾಮಿ ಮತ್ತು 2020-21 ರಲ್ಲಿ ಯಡಿಯೂರಪ್ಪ, 2022-23 ರಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ಜಾತಿ ಜನಗಣತಿ ವರದಿ ಸಿದ್ದವಾಗಿದ್ದರೂ, ಅಂದಿನ ಸರ್ಕಾರಗಳು ಅದರ ಗೋಜಿಗೆ ಹೋಗಿರಲಿಲ್ಲ. ಒಟ್ಟಾರೆ, ಕರ್ನಾಟಕ ಸರ್ಕಾರ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲು ಉತ್ಸುಕವಾಗಿದ್ದು, ಜಾತಿ ಜನಗಣತಿ ಹೊರಬಿದ್ದ ಮೇಲೆ ರಾಜಕೀಯ ಇನ್ನಷ್ಟು ಗರಿಗೆದರಲಿದೆ. ಯಾವ ಸಮುದಾಯ ಎಷ್ಟು ಸಂಖ್ಯೆಯಲ್ಲಿದೆ ಅನ್ನೋದು ನಿಖರವಾಗಿ ತಿಳಿದುಬರಲಿದೆ.