ಮಂಗಳೂರು(ತಿರುವನಂತಪುರ): ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೇರಳದ ಹಲವು ಭಾಗಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ತಿರುವನಂತಪುರದ ಶಾಲಾ ಕಾಲೇಜುಗಳಿಗೆ ಇಂದು(ಅ.16) ರಜೆ ಘೋಷಿಸಲಾಗಿದೆ.
ಮಳೆಯಿಂದಾಗಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಕೆಲವೆಡೆ ಭೂಕುಸಿತವೂ ಸಂಭವಿಸಿದೆ ಎಂದು ವರದಿಯಾಗಿದೆ. ನೀರು ನುಗ್ಗಿದ ಮನೆಗಳಿಂದ ಜನರನ್ನು ರಕ್ಷಣಾ ಸಿಬ್ಬಂದಿ ದೋಣಿಯ ಮೂಲಕ ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಿದ್ದಾರೆ. ಈ ನಡುವೆ, ಕೇಂದ್ರ ಜಲ ಆಯೋಗವು ಪ್ರವಾಹದ ಎಚ್ಚರಿಕೆ ನೀಡಿದ್ದು ತಿರುವನಂತಪುರಂ ಜಿಲ್ಲೆಯ ಕರಮಾನ, ನೆಯ್ಯರ್ ಮತ್ತು ವಾಮನಪುರ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದೆ. ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಅ.15ರಂದು ಆರೆಂಜ್ ಅಲರ್ಟ್ ಘೋಷಿಸಿತ್ತು. ರಾಜ್ಯದ ಎಂಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.