ಮಂಗಳೂರು: ಹಿಂದೂ ಸಂಘಟನೆಗಳ ವಿರೋಧದ ನಡುವೆಯೂ ದ.ಕ.ಜಿಲ್ಲಾಡಳಿತ ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂತೆ ವ್ಯಾಪಾರದಲ್ಲಿ ಮುಸ್ಲಿಂ ಸಂತೆ ವ್ಯಾಪಾರಿಗಳಿಗೆ ಅವಕಾಶ ನೀಡಿದೆ. ಇದಕ್ಕೆ ಟಕ್ಕರ್ ನೀಡಿರುವ ಹಿಂದೂ ಸಂಘಟನೆಗಳು ಹಿಂದೂಗಳ ಅಂಗಡಿಗಳಿಗೆ ಭಗವಧ್ವಜ ಹಾರಿಸಿ ಭಗವದ್ಭಕ್ತರು ಇದೇ ಅಂಗಡಿಯಲ್ಲಿ ವ್ಯಾಪಾರ ಮಾಡಬೇಕೆಂದು ಕರೆ ನೀಡಿದೆ.
ಮಂಗಳಾದೇವಿಯ ನವರಾತ್ರಿ ಜಾತ್ರಾ ಮಹೋತ್ಸವದ ಸಂತೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಿ ದೇವಾಲಯದ ಆಡಳಿತ ಮಂಡಳಿಯು ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅಂಗಡಿಗಳ ಏಲಂ ಮಾಡಿತ್ತು. ಇದನ್ನು ವಿರೋಧಿಸಿ ದ.ಕ. ಮತ್ತು ಉಡುಪಿ ಜಿಲ್ಲೆಯ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಮುಸ್ಲಿಂ ವ್ಯಾಪಾರಿಗಳಿಗೂ ವ್ಯಾಪಾರಕ್ಕೆ ಅವಕಾಶ ಕೊಡಬೇಕೆಂದು ಪ್ರತಿಭಟನೆ ನಡೆಸಿತ್ತು. ಕೊನೆಗೂ ಜಿಲ್ಲಾಡಳಿತಕ್ಕೆ ಒತ್ತಡ ತಂದು, ಮುಸ್ಲಿಂ ವ್ಯಾಪಾರಿಗಳಿಗೆ ಮಂಗಳಾದೇವಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಗಿಟ್ಟಿಸಿಕೊಂಡಿತ್ತು. ಇದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಯ ಕಾರ್ಯಕರ್ತರು, ಮುಸ್ಲಿಂ ವ್ಯಾಪಾರಿಗಳಿಗೆ ಟಕ್ಕರ್ ನೀಡಿದ್ದು, ದೇಗುಲಕ್ಕೆ ಬರುವ ಹಿಂದೂ ಭಕ್ತರಿಗೆ ಹಿಂದೂಗಳ ಅಂಗಡಿ ಎಂದು ತಿಳಿಯಲು ಎಲ್ಲಾ ಹಿಂದೂಗಳ ಅಂಗಡಿ ಮುಂದೆ ಭಗವಧ್ವಜ ಕಟ್ಟಿದ್ದಾರೆ. ದೇವಸ್ಥಾನದ ಆಸುಪಾಸಿನಲ್ಲಿ ಹಿಂದೂಗಳಿಗೆ ಅವಕಾಶ ನೀಡಬೇಕು. ಹಿಂದೂ ದೇವರನ್ನು ನಂಬದ, ಮೂರ್ತಿ ಪೂಜೆ ವಿರೋಧಿಗಳಿಗೆ ನಮ್ಮ ಉತ್ಸವದಲ್ಲಿ ಅವಕಾಶ ಕೊಡಬಾರದು. ದೇವಸ್ಥಾನದಲ್ಲಿ ವ್ಯಾಪಾರ ಮಾಡೋದು ಹಿಂದೂ ವ್ಯಾಪಾರಿಗಳ ಹಕ್ಕು. ಆದ್ದರಿಂದ ಹಿಂದೂ ವ್ಯಾಪಾರಸ್ಥರ ಅಂಗಡಿಗಳ ಮುಂದೆ ಭಗವಧ್ವಜ ಹಾಕಿದ್ದೇವೆ ಎಂದು ವಿಎಚ್ ಪಿ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಮಂಗಳಾ ದೇವಿ ದೇವಸ್ಥಾನದ ದಸರಾ ಜಾತ್ರೆಯಲ್ಲಿ ಹಿಂದೂ ವ್ಯಾಪಾರಸ್ಥರ ಮಳಿಗೆಗಳಿಗೆ ಬಲವಂತದಿಂದ ಕೇಸರಿ ಬಾವುಟ ಕಟ್ಟಿ, ಮುಸ್ಲಿಂ ವ್ಯಾಪಾರಿಗಳಲ್ಲಿ ಹಿಂದೂಗಳು ವ್ಯಾಪಾರ ನಡೆಸಬಾರದು ಎಂದು ಬಹಿರಂಗವಾಗಿ ಕರೆ ನೀಡಿರುವ ಬಜರಂಗ ದಳದ ಶರಣ್ ಪಂಪ್ ವೆಲ್ ಮತ್ತು ಗ್ಯಾಂಗನ್ನು ಕೋಮು ಪ್ರಚೋದಕ ಕಠಿಣ ಸೆಕ್ಷನ್ ಗಳಡಿ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಇಂದು ದ ಕ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಮನವಿ ಸಲ್ಲಿಸಲಾಗಿದೆ. ಜಾತ್ರೆ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ ವೇದಿಕೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಕಾರ್ಡ್ ವಿತರಣೆಯನ್ನು ಈ ತಿಂಗಳಾತ್ಯದ ಒಳಗಡೆ ಒದಗಿಸಿ ಸಮಸ್ಯೆ ಬಗೆಹರಿಸಲು ಕೇಳಿಕೊಂಡಿದೆ.
ಮನವಿ ಸ್ವೀಕರಿಸಿದ ಸಚಿವ ದಿನೇಶ್ ಗುಂಡೂರಾವ್ ಮಂಗಳಾದೇವಿ ದೇವಸ್ಥಾನ ಜಾತ್ರೆಯ ಅಂಗಡಿಗಳಲ್ಲಿ ಕೇಸರಿ ಧ್ವಜ ಹಾಕಿರುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಇದು ಸಂವಿಧಾನ ಆಧಾರಿತ ದೇಶವೇ ಹೊರತು ಧರ್ಮಾಧಾರಿತ ದೇಶ ಅಲ್ಲ, ಯಾರನ್ನೂ ಯಾರಿಗೂ ನಿರ್ಬಂಧ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.