ಮಂಗಳೂರು(ಶಿರಸಿ): ನ.1 ರಿಂದ ಮೇ ಕೊನೆಯವರೆಗೆ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಲಾಗುವುದು ಎಂದು ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಅಧ್ಯಕ್ಷತೆಯಲ್ಲಿ ಅ.18ರಂದು ನಡೆದ ಗುತ್ತಿಗೆದಾರ ಕಂಪನಿ ಆರ್.ಎನ್.ಎಸ್ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸೇತುವೆ ಕಾಮಗಾರಿ ಹಾಗೂ ದೇವಿಮನೆ ಘಾಟ್‌ನಲ್ಲಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಶಿರಸಿ ಉಪವಿಭಾಗ ವ್ಯಾಪ್ತಿಗೆ ಬರುವ ಶಿರಸಿ ಕುಮಟಾ ಹೆದ್ದಾರಿಯಲ್ಲಿ 33 ಕಿ.ಮಿ.ನಲ್ಲಿ 27ಕಿ.ಮಿ ರಸ್ತೆ ಕಾಮಗಾರಿ ಮುಗಿದಿದೆ. ಆದರೆ ಸಣ್ಣ ಹಾಗೂ ದೊಡ್ಡ ಸೇತುವೆಗಳು ಸೇರಿ ಒಟ್ಟು 9 ಸೇತುವೆಗಳ ಕಾಮಗಾರಿ ನಡೆಯಬೇಕಿದೆ. ಜೊತೆಗೆ ದೇವಿಮನೆ ಘಾಟ್‌ನಲ್ಲಿ ಕಾಮಗಾರಿ ನಡೆಯಬೇಕಿದ್ದು, ಸೇತುವೆ ಕಾಮಗಾರಿ ನಡೆಯುವ ಸಮಯದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಕಷ್ಟಸಾಧ್ಯವಾದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉಪ ವಿಭಾಗಾಧಿಕಾರಿ ದೇವರಾಜ್ ತಿಳಿಸಿದ್ದಾರೆ. ಬಂದ್ ಆಗಲಿರುವ ಶಿರಸಿ – ಕುಮಟಾ ಹೆದ್ದಾರಿ ಸಂಪರ್ಕಿಸುವ ರಸ್ತೆಗಳಲ್ಲಿ ಈ ಬಗ್ಗೆ ಮಾಹಿತಿ ಇರುವ ಬೋರ್ಡ್ ಗಳನ್ನು ಹಾಕಿ ಜನರಿಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.