ಮಂಗಳೂರು: ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಸದಾನಂದ ಗೌಡರು ದೆಹಲಿಗೆ ಪ್ರಯಾಣಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಂದ ಬುಲಾವ್ ಬಂದಿರುವುದಾಗಿ ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷದ ಹೀನಾಯ ಸೋಲು, ತದನಂತರದ ಬೆಳವಣಿಗೆ, ವಿರೋಧ ಪಕ್ಷದ ನಾಯಕನ ಆಯ್ಕೆ ಗೊಂದಲ ಮತ್ತು ವಿಳಂಬ, ರಾಜ್ಯಾಧ್ಯಕ್ಷರ ಆಯ್ಕೆ ಗೊಂದಲ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಡಿ ವಿ ಸದಾನಂದ ಗೌಡ ಮಾಧ್ಯಮಗಳಲ್ಲಿ ತೀಕ್ಷ್ಣವಾಗಿ ಟೀಕೆ ಮಾಡುತ್ತಿದ್ದರು. ಮಾತ್ರವಲ್ಲದೆ ಪಕ್ಷದ ರಾಜ್ಯ ನಾಯಕರು ತಮಗೆ ಇಷ್ಟ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದು ಪಕ್ಷದಲ್ಲಿ ಆಂತರಿಕ ಗೊಂದಲಗಳು ಹೆಚ್ಚುವಂತೆ ಮಾಡಿತ್ತು. ಡಿ ವಿ ಸದಾನಂದ ಗೌಡ ಅವರಿಗೆ ಹೈಕಮಾಂಡ್ ಯಾವ ಕಾರಣಕ್ಕೆ ಬುಲಾವ್ ನೀಡಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯಲು ಬುಲಾವ್ ನೀಡಿರಬಹುದು ಎಂದು ಅಭಿಪ್ರಾಯ ಪಡೆಯಲಾಗಿದೆ. ಇದರೊಂದಿಗೆ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿರುವ ಡಿ ವಿ ಸದಾನಂದ ಗೌಡ ಅವರಿಗೆ ಮತ್ತೆ ಕೇಂದ್ರ ಅಥವಾ ರಾಜ್ಯದಲ್ಲಿ ಉನ್ನತ ಸ್ಥಾನ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮಾಜಿ ಮುಖ್ಯ ಮಂತ್ರಿ ಮತ್ತು ಕೇಂದ್ರ ಸಚಿವರಾಗಿದ್ದ ಡಿ ವಿ ಸದಾನಂದಗೌಡ ಪಕ್ಷ ತೊರೆದು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಬಗ್ಗೆ ಊಹಾಪೋಹ ಮತ್ತು ವದಂತಿಗಳು ಹರಿದಾಡುತ್ತಿದ್ದು ಪಕ್ಷಕ್ಕಾಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಬುಲಾವ್ ನೀಡಲಾಗಿದೆ ಎಂದೂ ಹೇಳಲಾಗುತ್ತಿದೆ. ಡಿವಿಎಸ್ ದೆಹಲಿ ಭೇಟಿಯೊಂದಿಗೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಗರಿಗೆದರಲಿದೆ. ನವರಾತ್ರಿ ಬಳಿಕ ಅ.25ರಂದು ಡಿ ವಿ ಸದಾನಂದ ಗೌಡ ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.