ಮಂಗಳೂರು (ಕೋಲಾರ): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಆಲಿಯಾಸ್ ಕೌನ್ಸಿಲರ್ ಶ್ರೀನಿವಾಸ್ ಎಂಬವರನ್ನು ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ಹತ್ಯೆ ಮಾಡಲಾಗಿದೆ.
ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಬಾರ್ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ವೇಳೆ ಆರು ಮಂದಿ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ. ಎದೆ, ತಲೆ ಸಹಿತ ದೇಹದ ಹಲವೆಡೆ ಗಂಭೀರ ಗಾಯವಾಗಿದ್ದ ಶ್ರೀನಿವಾಸ್ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಉಸಿರು ಚೆಲ್ಲಿದ್ದಾರೆ. ಶ್ರೀನಿವಾಸ್ ಗೃಹಸಚಿವ ಪರಮೇಶ್ವರ್ ಹಾಗೂ ರಮೇಶ್ ಕುಮಾರ್ ಅವರ ಆಪ್ತರಾಗಿದ್ದರು ಎನ್ನಲಾಗಿದೆ.
ಬಾರ್ ಕಾಮಗಾರಿ ವೀಕ್ಷಣೆ ಮುಗಿಸಿ ವಾಪಸ್ ತೋಟದ ಮನೆಗೆ ಬಂದಿದ್ದೆವು. ಎರಡು ಬೈಕ್ ನಲ್ಲಿ ಆರು ಜನ ತೋಟದ ಮನೆಗೆ ಬಂದಿದ್ದರು. ಬಂದ ತಕ್ಷಣ ಅಂಕಲ್ ಚೆನ್ನಾಗಿದ್ದೀರ ಎಂದು ಮಾತನಾಡಿಸಿದ್ರು. ಶೇಕ್ ಹ್ಯಾಂಡ್ ಕೊಡುವ ನೆಪದಲ್ಲಿ ಏಕಾಏಕಿ ತಲವಾರಿನಿಂದ ದಾಳಿ ಮಾಡಿದ್ದಾರೆ. ಭಯಕ್ಕೆ ನಾವು ಓಡಿಹೋದೆವು, ನನ್ನ ಮೇಲೆಯೂ ಅಟ್ಯಾಕ್ ಮಾಡಿದ್ದಾರೆ. ಆರೋಪಿಗಳು ಹಲವಾರು ಬಾರಿ ಇದೇ ಏರಿಯಾದಲ್ಲಿ ಓಡಾಡುತ್ತಿದ್ದದ್ದು ನೋಡಿದ್ದೇನೆ ಎಂದು ಪ್ರತ್ಯಕ್ಷದರ್ಶಿ ಅಮರ್ ಹೇಳಿದ್ದಾರೆ.