ಮಂಗಳೂರು(ಬಂಟ್ವಾಳ): ನವರಾತ್ರಿ ಸಂದರ್ಭದಲ್ಲಿ ವಿವಿಧ ವೇಷಧರಿಸಿ ಜನರಿಗೆ ಮನರಂಜನೆ ಕೊಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಆದರೆ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವಂತಹ ಮತ್ತು ಯಾವುದೇ ಸಮುದಾಯ, ಗುಂಪು, ವರ್ಗಕ್ಕೆ ನೋವಾಗುವಂತಹ ವೇಷ ಧರಿಸಬಾರದೆಂಬುವುದು ಅಲಿಖಿತ ನಿಯಮ. ಆದರೂ ಕೆಲವೊಮ್ಮೆ ಇದನ್ನೆಲ್ಲ ಮೀರಿ ವೇಷಧರಿಸಿ ಮುಜುಗರಕ್ಕೀಡಾಗುವ ಪ್ರಸಂಗಗಳು ನಡೆಯುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬಿಸಿರೋಡ್ ನಲ್ಲಿ ಘಟನೆಯೊಂದು ನಡೆದಿದೆ. ಇಲ್ಲೊಬ್ಬ ವೇಷಧಾರಿ ಯಕ್ಷಗಾನದ ವೇಷ ಹಾಕಿದ್ದ ಎಂಬ ಕಾರಣಕ್ಕಾಗಿ ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ವೇಷಧಾರಿ ವ್ಯಕ್ತಿಯನ್ನು ತಡೆದು, ವೇಷವನ್ನು ಕಳಚಿಸಿದ ಪ್ರಸಂಗ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ದಾವಣಗೆರೆ ಮೂಲದ ವ್ಯಕ್ತಿಯೊಬ್ಬ ಅ.21ರಂದು ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣ ಮಂದಿರದ ಬಳಿ ಯಕ್ಷಗಾನದ ವೇಷ ಹಾಕಿ ಹೋಗುತ್ತಿದ್ದ ಈ ವೇಳೆ ಇಲ್ಲಿಗೆ ಆಗಮಿಸಿದ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಯಕ್ಷಗಾನದ ವೇಷ ಹಾಕುವಂತಿಲ್ಲ, ಅದನ್ನು ತೆಗೆಯುವಂತೆ ಒತ್ತಾಯ ಮಾಡುವ ಬಗ್ಗೆ ವಿಡಿಯೋದಲ್ಲಿ ಕಂಡು ಬಂದಿದೆ. ಯಕ್ಷಗಾನವನ್ನು ನಾವು ಇಲ್ಲಿ ಪೂಜೆ ಮಾಡುತ್ತೇವೆ ನಿನಗೆ ತಿಳಿಯದೇ? ನೀನು ವೇಷ ಹಾಕಿ ಬಿಕ್ಷೆ ಬೇಡುತ್ತಿಯಾ ಎಂದು ಪ್ರಶ್ನಿಸಿದ್ದಾರೆ. ನಾನು ತಪ್ಪು ಮಾಡಿದ್ದರೆ ನನಗೆ ಹೊಡೆಯಿರಿ ಎಂದು ವೇಷಧಾರಿ ಹೇಳಿದಾಗ ಹೊಡೆಯುವುದು ಅಲ್ಲ ವೇಷ ತೆಗೆಯದಿದ್ದಲ್ಲಿ ಕೈ ಕಾಲು ಮುರಿದು ಹಾಕುವಂತೆ ಬೆದರಿಸಿ, ಬೈದಿರುವುದು ವಿಡಿಯೋದಲ್ಲಿದೆ. ವೇಷಧಾರಿಯ ವೇಷವನ್ನು ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಜಿಲ್ಲಾಡಳಿತ ಯಾವ ಯಾವ ವೇಷವನ್ನು ಹಾಕಬಾರದು ಎಂಬ ಬಗ್ಗೆ ಸುತ್ತೋಲೆ ಹೊರಡಿಸಬೇಕು ಎಂಬ ಕೂಗು ಕಲಾವಿದರ ವಲಯದಲ್ಲಿ ಕೇಳಿಬಂದಿದೆ.