ಮಂಗಳೂರು: ಇಸ್ರೇಲ್ ಪರವಾಗಿ ಕತಾರ್‌ನಲ್ಲಿ ಬೇಹುಗಾರಿಕೆ ಮಾಡಿದ್ದ ಆರೋಪದ ಮೇಲೆ ಭಾರತದ 8 ಮಂದಿ ಹಿರಿಯ ನೌಕಾಪಡೆಯ ಅಧಿಕಾರಿಗಳಿಗೆ ಕತಾರ್ ಗಲ್ಲು ಶಿಕ್ಷೆ ವಿಧಿಸಿದೆ. ಇವರು ಬೇಹುಗಾರಿಕೆ ನಡೆಸಿದ ಬಗ್ಗೆ ತಮ್ಮಲ್ಲಿ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಹೊಂದಿದ್ಧೇವೆ ಎಂದು ಕತಾರ್ ತಿಳಿಸಿದೆ.
ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಕಳೆದ ಎಂಟು ತಿಂಗಳಿನಿಂದ ಕತಾರ್‌ನಲ್ಲಿ ಏಕಾಂತ ಸೆರೆಮನೆಯಲ್ಲಿದ್ದ ಎಂಟು ಭಾರತೀಯರಿಗೆ ಗಲ್ಲು ಶಿಕ್ಷೆ ನೀಡಲಾಗಿದ್ದು, ಇವರು ಬೇಹುಗಾರಿಕಯ ಕಠಿಣ ಆರೋಪಗಳನ್ನು ಎದುರಿಸಿದ್ದರು ಎಂದು ಕತಾರ್ ತಿಳಿಸಿದೆ. ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ಸೈಲರ್ ರಾಗೇಶ್ ವಿರುದ್ಧ ಕತಾರ್ ಬೇಹುಗಾರಿಕೆಯ ಆರೋಪ ಮಾಡಿತ್ತು. ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಾಗಿದ್ದ ಇವರು ಇಸ್ರೇಲ್ ಪರವಾಗಿ ಕತಾರ್‌ನಲ್ಲಿ ಬೇಹುಗಾರಿಕೆ ಮಾಡುತ್ತಿದ್ದರು. ಈ ಕುರಿತಾಗಿ ತಮ್ಮಲ್ಲಿ ಸಕಲ ಎಲೆಕ್ಟ್ರಾನಿಕ್ ಸಾಕ್ಷಿಗಳಿವೆ ಎಂದು ಕತಾರ್ ಈ ಹಿಂದೆ ತಿಳಿಸಿತ್ತು.
ಕತಾರ್ ನೀಡಿರುವ ಈ ಮರಣ ದಂಡನೆ ಶಿಕ್ಷೆಯನ್ನು ಪ್ರಶ್ನೆ ಮಾಡುವುದಾಗಿ ಭಾರತ ಸರ್ಕಾರ ತಿಳಿಸಿದೆ. ಈ ಪ್ರಕರಣವನ್ನು ಈಗ ಭಾರತೀಯ ಏಜೆನ್ಸಿಗಳು ಸಾಧ್ಯವಾದಷ್ಟು ಉನ್ನತ ಮಟ್ಟದಲ್ಲಿ ಕೈಗೆತ್ತಿಕೊಂಡಿವೆ ಆದರೆ ಕತಾರ್ ಸರ್ಕಾರವು ಈ ವಿಷಯದಲ್ಲಿ ಪಶ್ಚಾತ್ತಾಪ ಪಡುವ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ. ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು “ಫ್ರೇಮ್” ಮಾಡಿರುವ ಸಾಧ್ಯತೆ ಇದೆ ಎಂದು ಈ ಹಿಂದೆ ಭಾರತ ಹೇಳಿತ್ತು.